ಉಜಿರೆಯಿಂದ ಸುಮಾರು ಹತ್ತು ಕಿ.ಮೀ ದೂರದ ಧರ್ಮಸ್ಥಳಕ್ಕೆ ಪಾದಯಾತ್ರಿಗಳು ಬರುತ್ತಿದ್ದಂತೆ ಧರ್ಮಸ್ಥಳ ಮಹಾದ್ವಾರದ ಬಳಿ ಕ್ಷೇತ್ರದ ವತಿಯಿಂದ ವಾದ್ಯಘೋಷಗಳೊಂದಿಗೆ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಡಾ. ಹೆಗ್ಗಡೆಯವರ ಆಪ್ತ ಸಹಾಯಕ ಎ. ವೀರೂ ಶೆಟ್ಟಿ, ದೇವಸ್ಥಾನದ ಪಾರುಪತ್ಯೆಗಾರ ಲಕ್ಷ್ಮೀನಾರಾಯಣ ರಾವ್ ಮತ್ತಿತರರು ಪಾದಯಾತ್ರಿಗಳನ್ನು ಸ್ವಾಗತಿಸಿದರು.
ಅಮೃತವರ್ಷಿಣಿ ಸಭಾ ಭವನದಲ್ಲೂ ಹಳೆಕೋಟೆಯ ಶ್ರೀ ಭಗವಾನ್ ಶಿರ್ಡಿ ಸಾಯಿ ಸತ್ಯಸಾಯಿ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ಜರುಗಿತು.
ಪಾದಯಾತ್ರಿಗಳು ಶಿಸ್ತುಬದ್ಧವಾಗಿ ಸಾಗಿದರು. ಪಾದಯಾತ್ರೆಯುದ್ದಕ್ಕೂ ಜನರು ದೇವರ ನಾಮಸ್ಮರಣೆ ಮಾಡುತ್ತಾ ಸಾಗಿದರು. ಕನ್ಯಾಡಿಯಲ್ಲಿ ಸೇವಾ ಭಾರತಿ, ಶಾಂತಿವನ ಹಾಗೂ ಇತರ ಕಡೆಗಳಲ್ಲೂ ಪಾದಯಾತ್ರಿಗಳಿಗೆ ಶರಬತ್, ಕುಡಿಯುವ ನೀರು, ಪಾನೀಯ, ಪಾನಕದ ವ್ಯವಸ್ಥೆಯನ್ನು ಮಾಡಿದರು.
ಆಕರ್ಷಣೆಗಳಿಸಿದ ಪಾದಯಾತ್ರೆ:
ಉಜಿರೆ ರಥಬೀದಿಯಿಂದ ಧರ್ಮಸ್ಥಳ ತನಕ ನಡೆದ ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿ ಭಜನಾ ತಂಡಗಳು, ಚೆಂಡೆ, ಕೊಂಬು, ಕಹಳೆ, ವಿವಿಧ ವೇಷ, ಭೂಷಣಗಳ ತಂಡಗಳು ತಾಲೂಕಿನ ವಿವಿಧ ಭಜನಾ ಮಂಡಳಗಳ ತಂಡ ಮೆರವಣಿಗೆ ಜೊತೆ ಸಾಗಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಪ್ರಗತಿ ಬಂಧು ತಂಡಗಳು, ಕ್ಷೇತ್ರದ ಸಿಬ್ಬಂದಿಗಳು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ನಾಗರಿಕರು ಮೆರವಣಿಗೆಯುದ್ದಕ್ಕೂ ಸಾಗಿದರು.