ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದಿಂದ “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Suddi Udaya

ಉಜಿರೆ: ಜೀವನ ಕೌಶಲ್ಯಗಳ ನಿರಂತರ ಕಲಿಕೆ ಮತ್ತು ಮಾನಸಿಕ ಆರೋಗ್ಯದ ಸುಸ್ಥಿರ ನಿರ್ವಹಣೆ ಮಾತ್ರವೇ ದೀರ್ಘಕಾಲದ ವೃತ್ತಿಪರತೆಯಲ್ಲಿ ನೆರವಾಗಬಲ್ಲವು ಎಂದು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಎ. ಕುಮಾರ ಹೆಗಡೆ ಅಭಿಪ್ರಾಯಪಟ್ಟರು.


ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ವಿಭಾಗವು “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕುರಿತು ಆಯೋಜಿಸಿದ ಒಂದು ದಿನದ ಕೌಶಲ್ಯಾಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಜೀವನ ಕೌಶಲ್ಯಗಳು ಮತ್ತು ಮಾನಸಿಕ ಆರೋಗ್ಯವೆಂಬ ಎರಡು ಕಣ್ಣುಗಳು ವಿದ್ಯಾರ್ಥಿಯೋರ್ವನಿಗೆ ತುಂಬಾ ಮುಖ್ಯ. ಜನರೊಡನೆ ಬೆರೆತು ಕೆಲಸ ಮಾಡುವ ಸಂದರ್ಭದಲ್ಲಿ ಅನಿರೀಕ್ಷಿತ ಸಂದರ್ಭಗಳನ್ನು ಎದುರುಗೊಳ್ಳುವ ಸಾಧ್ಯತೆಯಿರುತ್ತದೆ. ಇಷ್ಟಪಟ್ಟ ಕೆಲಸವೇ ಸಿಗುವುದೆಂಬ ಭರವಸೆಯೂ ಇಲ್ಲ. ಬದುಕು ತೋರಿದ ದಾರಿಯಲ್ಲಿ ನಿಷ್ಠೆಯಿಂದ ನಡೆಯಬೇಕಾಗುತ್ತದೆ ಎಂದರು.


ಯಾವುದೇ ವೃತ್ತಿಯಿರಲಿ, ಅದರಲ್ಲಿ ಸರ್ವಾಂಗೀಣ ಅಭಿವೃದ್ಧಿಯನ್ನು ಹೊಂದಿ ಯಶಸ್ವಿಯಾಗಬೇಕಾದರೆ ಭೌತಿಕ, ಮಾನಸಿಕ ಮತ್ತು ಭಾವನಾತ್ಮಕವಾದ ಸ್ಥಿರತೆ ಬೇಕಾಗುತ್ತದೆ. ಫಿಟ್ನೆಸ್ ಕಾಪಾಡಿಕೊಳ್ಳುವುದರ ಜೊತೆಗೆ ಸಮಯ ನಿರ್ವಹಣೆಯ ಕೌಶಲ್ಯವೂ ಇರಬೇಕು. ಒಬ್ಬ ಯಶಸ್ವಿ ಸಾಮಾಜಿಕ ಕಾರ್ಯಕರ್ತ ಭಿನ್ನ ಭಿನ್ನ ಜನರೊಡನೆ ಸಂವಹನ ಮಾಡಬೇಕಾದ ಸಂದರ್ಭ ಒದಗಿಬರಬಹುದು. ಆಗ ಸಂವಹನ ಕೌಶಲ್ಯ, ತಾಳ್ಮೆ, ನಮ್ರತೆಯಂತಹ ಗುಣಗಳು ನೆರವಾಗಬಲ್ಲವು ಎಂದು ಸಲಹೆ ನೀಡಿದರು.


ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಲ್ಕತ್ತೆಯ ಮನಃಶಾಸ್ತ್ರಜ್ಞ ಸುಮಿತ್ ದತ್ತ ಮಾತನಾಡಿದರು. ವಿಭಾಗದ ಮುಖ್ಯಸ್ಥರಾದ ಡಾ.ರವಿಶಂಕರ್ ಕೆ ಆರ್ , ಸಹಾಯಕ ಪ್ರಾಧ್ಯಾಪಕರಾದ ಶ್ರೀ ಸುವೀರ್ ಜೈನ್ ಹಾಗೂ ಡಾ.ಅತುಲ್ ಎಸ್. ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಕ್ಷತಾ ಕಾರಂತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಅಶ್ವಿನಿ ವಂದಿಸಿದರು. ಶಾಹಿದ್ ಅಫ್ರಿದಿ ಕಾರ್ಯಕ್ರಮ ನಿರೂಪಿಸಿದರು.

Leave a Comment

error: Content is protected !!