ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ಬಹುಮಾನ ವಿತರಣಾ ಸಮಾರಂಭ ಜರಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡರವರು ಆಗಮಿಸಿದ್ದು, ಕ್ರೀಡೆ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ವಿಭಾಗದ ಬಹುಮಾನ ವಿತರಣೆಗಳನ್ನು ನೆರವೇರಿಸಿ ಮಾತನಾಡುತ್ತಾ, ಬಹುಮಾನ ಸಾಂಕೇತಿಕವಾಗಿದ್ದು ಈ ಮೂಲಕ ನಮ್ಮನ್ನು ನಾವು ಅರಿತುಕೊಂಡು ಮುಂದುವರಿಯಲು, ಇನ್ನಷ್ಟು ಸಾಧನೆಗೆ ಪ್ರೇರಣೆ ನೀಡುವ ಸಂದರ್ಭವಾಗಿದೆ. ಶಿಕ್ಷಣ ಎಂದರೆ ಕೇವಲ ಅಂಕ ಸಾಧನೆಯಲ್ಲ. ಜೊತೆಗೆ ಗುಣವನ್ನು ರೂಢಿಸಿಕೊಳ್ಳಬೇಕಾದ್ದೂ ಅದರ ಉದ್ದೇಶವಾಗಿದೆ. ಬೆಳಾಲು ಪ್ರೌಢಶಾಲೆಯು ಈ ಹಿನ್ನೆಲೆಯಲ್ಲಿ ಉತ್ತಮ ಸಂಸ್ಥೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಅತಿಥಿಗಳಾದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಶುಭಕೋರಿದರು. ವೇದಿಕೆಯಲ್ಲಿ ವಿದ್ಯಾರ್ಥಿ ನಾಯಕಿ ಕು. ಅಮೂಲ್ಯರವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶ್ರೀಧ ಮಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಬಿ. ಸೋಮಶೇಖರ ಶೆಟ್ಟಿಯವರು ‘ನವ್ಯಜ್ಯೋತಿ’ ಶಾಲಾ ಹಸ್ತಪ್ರತಿಯನ್ನು ಬಿಡುಗಡೆಗೊಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ರವರು ಸ್ವಾಗತಿಸಿ ವಿದ್ಯಾರ್ಥಿ ಕು. ಶರಣ್ಯ ವಂದಿಸಿದರು. ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಜವಾಬ್ದಾರಿಯನ್ನು ಶಿಕ್ಷಕರಾದ ಕೃಷ್ಣಾನಂದ ಮತ್ತು ಗಣೇಶ್ ರವರು ನಿರ್ವಹಿಸಿದರು, ಕಾರ್ಯಕ್ರಮವನ್ನು ಜಗದೀಶ್ ರವರು ನಿರೂಪಿಸಿದರು.
ಸಭೆಯ ನಂತರ ವಿದ್ಯಾರ್ಥಿಗಳಿಂದ ವಿವಿಧ ಕಲಾ ಕಾರ್ಯಕ್ರಮಗಳು ಮತ್ತು ಶ್ರೀಕೃಷ್ಣಕಾರುಣ್ಯ ಯಕ್ಷಗಾನ ಬಯಲಾಟ ಜರಗಿತು.