ಧರ್ಮಸ್ಥಳ : ಶ್ರೀ ಮಂ.ಅ.ಪ್ರೌ. ಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ

Suddi Udaya

ಧರ್ಮಸ್ಥಳ : ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳ ದಲ್ಲಿ ಡಿ 27 ರಂದು ವಾರ್ಷಿಕ ಪ್ರತಿಭಾ ದಿನಾಚರಣೆಯು ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಗೌರವಾನ್ವಿತ ಡಾ ಸತೀಶ್ಚಂದ್ರರವರು ನಿವೃತ್ತ ಮುಖ್ಯೋಪಾಧ್ಯಾಯರಾದ ಧನ್ಯ ಕುಮಾರ್, ಯಶೋಧರ ಇಂದ್ರ ಹಾಗೂ ಸರಕಾರಿ ಸೇವೆಗೆ ಸೇರಿದ ಶಿಕ್ಷಕರಾದ ರಂಜಿತ್ ಅವರನ್ನು ಶಾಲು, ಹಾರ ,
ಫಲಪುಷ್ಪ , ಸನ್ಮಾನ ಪತ್ರ ಹಾಗೂ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿ, ತಮ್ಮ ಮಾರ್ಗದರ್ಶನದ ಮಾತುಗಳ ಮೂಲಕ ಕಾರ್ಯಕ್ರಮಕ್ಕೆ ಶುಭ ಕೋರಿದರು. ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಬಿ. ಸೋಮಶೇಖರ ಶೆಟ್ಟಿ ಕಾರ್ಯಕ್ರಮವನ್ನು ದೀಪ ಪ್ರಜ್ವಲನದೊಂದಿಗೆ ಉದ್ಘಾಟಿಸಿ, ಉದ್ಘಾಟನಾ ನುಡಿಗಳನ್ನಾಡಿದರು.

ಧರ್ಮಸ್ಥಳ ಗ್ರಾಮ ಪಂಚಾಯಿತಿನ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ಅವರು ಧ್ವಜಾರೋಹಣ ನೆರವೇರಿಸಿ, ಶುಭ ಕೋರಿದರು. ಧರ್ಮಸ್ಥಳ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಅನಿಲ್ ಕುಮಾರ್ ರವರು ಭಾಗವಹಿಸಿ ಶಾಲಾ ವಾರ್ಷಿಕ ಸಂಚಿಕೆ ಮಂಜುಳಾವನ್ನು ಬಿಡುಗಡೆಗೊಳಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಅಭಿನಂದನೆಯನ್ನು ಸ್ವೀಕರಿಸಿದ ನಿವೃತ್ತ ಮುಖ್ಯೋಪಾಧ್ಯಾಯರಾದ ಧನ್ಯ ಕುಮಾರ್ ಅವರು ವೃತ್ತಿಜೀವನದ ಸವಿ ನೆನಪುಗಳನ್ನು ಹಂಚಿಕೊಂಡರು. ಜಿಲ್ಲಾ ಮಟ್ಟದಲ್ಲಿ ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಕ್ರೀಡಾತ್ಮಕವಾಗಿ ಸಾಧನೆಗೈದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳ ಮೂಲಕ ಪುರಸ್ಕರಿಸಲಾಯಿತು. 2023ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ಹಾಗೂ ಪ್ರಶಸ್ತಿ ಫಲಕವನ್ನು ನೀಡಿ ಗೌರವಿಸಲಾಯಿತು.


ಮುಖ್ಯೋಪಾಧ್ಯಾಯರಾದ ಎನ್ ಪದ್ಮರಾಜು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಶೈಕ್ಷಣಿಕ ವರದಿಯನ್ನು ಶಿಕ್ಷಕ ಜಯರಾಮಮಯ್ಯ ಅವರು ವಾಚಿಸಿದರು. ವಿದ್ಯಾರ್ಥಿನಿಯರಾದ ಕುಮಾರಿ ಭಾಗ್ಯ ಹಾಗೂ ಕುಮಾರಿ ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಗಗನ್ಯ ಅವರು ಸಂದೇಶ ಪತ್ರವನ್ನು ವಾಚಿಸಿದರು. ಕುಮಾರಿ ದೇವಿಕ ಕುಮಾರಿ ಅಮೃತ ಹಾಗೂ ಸಂದೇಶ ರವರು ಸಾಂಸ್ಕೃತಿಕ ವಿಭಾಗದ ಹಾಗೂ ಕ್ರೀಡಾ ವಿಭಾಗದ ಬಹುಮಾನ ವಿತರಣಾ ಕಾರ್ಯಕ್ರಮವನ್ನು ನಿರ್ವಹಿಸಿದರು ಗಣ್ಯ ಅತಿಥಿಗಳಿಗೆ ಮುಖ್ಯೋಪಾಧ್ಯಾಯರು ಸ್ಮರಣಿಕೆ ನೀಡಿ ಗೌರವಿಸಿದರು. ಶಿಕ್ಷಕ ಯುವರಾಜ ರವರು ಧನ್ಯವಾದ ನೀಡಿದರು.


ವಿದ್ಯಾರ್ಥಿಗಳಿಂದ ಜಾಂಬವತಿ ಕಲ್ಯಾಣ ಎಂಬ ಯಕ್ಷಗಾನ ಪ್ರಸಂಗ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಮನೋರಂಜನ ಕಾರ್ಯಕ್ರಮಗಳು ಅತ್ಯುತ್ತಮವಾಗಿ ಮೂಡಿ ಬಂದವು. ಸ್ಥಳೀಯ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಬಂಧುಗಳು ಶಾಲಾ ವಿದ್ಯಾರ್ಥಿಗಳ ಪೋಷಕ ಬಂಧುಗಳು ಹಿರಿಯ ವಿದ್ಯಾರ್ಥಿಗಳು ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು.

Leave a Comment

error: Content is protected !!