ಜ.6: ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಮಾತಾ-ಪಿತಾಗುರುದೇವೋಭವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: ಗುರುಕುಲ ಪದ್ಧತಿಯ ಶಿಕ್ಷಣದ ಮೂಲಕ ರಾಜ್ಯದಲ್ಲಿ ಪ್ರಖ್ಯಾತಿಯನ್ನು ಪಡೆಯುತ್ತಿರುವ, ಹಲವಾರು ಪ್ರತಿಭೆಗಳ ವಿಕಸನಕ್ಕೆ ಕಾರಣವಾದ ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಜ.೬ರಂದು ಮಾತಾ-ಪಿತಾಗುರುದೇವೋಭವ ಕಾರ್ಯಕ್ರಮ ಹಾಗೂ 2024-25ನೇ ಶೈಕ್ಷಣಿಕ ಸಾಲಿನಿಂದ ಪ್ರಥಮ ಮತ್ತು ದ್ವೀತಿಯ ಪಿಯುಸಿಯ ಬಡ ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆ ಮೂಲಕ ಉಚಿತ ಶಿಕ್ಷಣ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಶ್ಚಿತ್ ಕುಲಾಲ್ ಹೇಳಿದರು.


ಅವರು ಜ.2ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿ, ಜ. ೬ರಂದು ಸಂಸ್ಥೆಯಲ್ಲಿ ಮಾತಾ-ಪಿತಾಗುರುದೇವೋಭವ ಹೃದಯಸ್ಪರ್ಶಿ ಕಾರ್ಯಕ್ರಮ ಪ್ರತಿವರ್ಷದಂತೆ ಈ ವರ್ಷವೂ ನಡೆಯಲಿದೆ ಎಂದು ಹೇಳಿದರು. ಕುಂಭಶ್ರೀ ವಿದ್ಯಾಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹಲವಾರು ಬಡ, ನಿರ್ಗತಿಕ ವಿದ್ಯಾರ್ಥಿಗಳ ರಿಯಾಯಿತಿ ಹಾಗೂ ಉಚಿತ ಶಿಕ್ಷಣ ನೀಡುತ್ತಾ ಬಂದಿರುತ್ತೇವೆ. ಮುಂಬರುವ ಸಾಲಿಗೆ ಪ್ರಥಮ ಮತ್ತು ದ್ವಿತೀಯ ಪಿಯುಸಿಗೆ ಬಡ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಪರೀಕ್ಷೆಯ ಮೂಲಕ ಉಚಿತ ಶಿಕ್ಷಣ ನೀಡಲಿದ್ದೇವೆ ಅದಕ್ಕಾಗಿ ಜ. 26 ಶುಕ್ರವಾರದಂದು ಪ್ರವೇಶಾತಿ ಪರೀಕ್ಷೆಯನ್ನು ಹಮ್ಮಿಕೊಂಡಿದ್ದೇವೆ. ಈ ಯೋಜನೆ ಬಡ ವಿದ್ಯಾರ್ಥಿಗಳಿಗೆ ವರದಾನವಾಗಲಿದೆ ಎಂದು ಹೇಳಿದರು.


ಸಂಸ್ಥೆಯ ಸಂಸ್ಥಾಪಕ ಗಿರೀಶ್ ಕೆ.ಎಚ್ ಅವರು ಮಾತನಾಡಿ, ಗುರುಕುಲ ಪದ್ಧತಿಯ ಶಿಕ್ಷಣ ಮೂಲಕ ರಾಜ್ಯದ ವಿವಿಧ ಊರಿನ ಮಕ್ಕಳ ಶಿಕ್ಷಣ ದಾಹವನ್ನು ಕುಂಭಶ್ರೀ ವಿದ್ಯಾಸಂಸ್ಥೆ ನೀಗಿಸುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರದಲ್ಲಿ ಎದುರಾದ ಸಾವಿರಾರು ಅಡೆತಡೆಗಳನ್ನು ಎದುರಿಸಿ ಆತ್ಮವಿಶ್ವಾಸದಿಂದ ಮುನ್ನಡೆದು ಪ್ರಗತಿಪಥದಲ್ಲಿ ಮುಂದುವರಿಯುತ್ತಿರುವ ಈ ವಿದ್ಯಾಸಂಸ್ಥೆಯ ಸಾಧನೆಯನ್ನು ಗುರುತಿಸಿ, ಜ್ಞಾನಗಂಗೋತ್ರಿ ರಾಜ್ಯಪ್ರಶಸ್ತಿ-೨೦೦೮, ರಾಷ್ಟ್ರಮಟ್ಟದ ಸ್ಟಾರ್‌ಆಫ್ ಏಷ್ಯಾ ಪ್ರಶಸ್ತಿ-2019, ರಾಷ್ಟ್ರೀಯ ವಿದ್ಯಾಗೌರವ ಪ್ರಶಸ್ತಿ-2019, ಪ್ರಬುದ್ಧಭಾರತ ಪ್ರಶಸ್ತಿ-2021, ವಿದ್ಯಾರತ್ನ ಪ್ರಶಸ್ತಿ-2022, ಗೋಲ್ಡನ್ ಬುಕ್ ಆಫ್ ರೆಕಾಡ್ ಮತ್ತಿತರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.


ಜ.೬ರಂದು ನಡೆಯಲಿರುವ ಮಾತಾ-ಪಿತಾಗುರುದೇವೋಭವ ಕಾರ್ಯಕ್ರಮ ಮಕ್ಕಳಿಗೆ ನಮ್ಮ ಸಂಸ್ಕೃತಿ, ಆಚರಣೆ, ಪರಂಪರೆಯನ್ನು ನೆನಪಿಸಿ, ಉಳಿಸಿ, ಬೆಳೆಸುವ ಹೃದಯಸ್ಪರ್ಶಿ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ ಅವರು ಒದಗಿಸಿದ ಅನುದಾನದಲ್ಲಿ ಇಂಟರ್‌ಲಾಕ್ ಕಾಮಗಾರಿ ಹಾಗೂ ಶಾಲೆಯ ಹಿತೈಷಿ ದಾನಿ ದಿನೇಶ ದಾಮೋದರ ಗೋಖಲೆ ಚಿಕ್ಕಮಗಳೂರು ಅವರು ಕೊಡುಗೆಯಾಗಿ ನೀಡಿದ ಶಾಲಾ ಕೊಠಡಿಯ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.


ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಓಮನಾ ಅವರು ಮಾತನಾಡಿ, ಸಂಸ್ಥೆಯಲ್ಲಿ ೧೦ನೇ ಮತ್ತು ದ್ವೀತಿಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಮಾತಾ-ಪಿತಾಗುರುದೇವೋಭವ ಕಾರ್ಯಕ್ರಮ ನಡೆಯುತ್ತಿದೆ. ಇದೊಂದು ಹೃದಯಸ್ಪರ್ಶಿ ಮನಸ್ಸಿಗೆ ತಟ್ಟುವ ಕಾರ್ಯಕ್ರಮ, ಪ್ರತಿಯೊಂದು ವಿದ್ಯಾರ್ಥಿಯು ತನ್ನ ಮಾತಾ-ಪಿತಾರ ಆಶೀರ್ವಾದ ಪಡೆಯುವ ಭಾವನಾತ್ಮಕ ದೃಶ್ಯ ಕಣ್ಣಂಚಿನಲ್ಲಿ ನೀರು ತರಿಸುತ್ತದೆ. ಪ್ರತಿಯೊಂದು ಧರ್ಮದ ವಿದ್ಯಾರ್ಥಿ ಅವರವರ ಧರ್ಮದ ಪ್ರಕಾರ ಮಾತಾ-ಪಿತಾರಿಗೆ ಗೌರವಾರ್ಪಣೆ ಮಾಡುತ್ತಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಅಕ್ಷತಾ, ಹಳೆವಿದ್ಯಾರ್ಥಿ ಪೂಜಿತ್‌ಕುಲಾಲ್ ಉಪಸ್ಥಿತರಿದ್ದರು.

Leave a Comment

error: Content is protected !!