ಬೆಳ್ತಂಗಡಿ:ಭಾರತೀಯ ಭೂ ಸೇನೆಯಲ್ಲಿ ಸುದೀರ್ಘ 28 ವರ್ಷಗಳ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಕಲ್ಲಗುಡ್ಡೆ ನಿವಾಸಿ ಸುಬೇದಾರ್ ಮೇಜರ್ ಶಿವಕುಮಾರ್ ಅವರಿಗೆ ಭವ್ಯ ಸ್ವಾಗತ ಕಾರ್ಯಕ್ರಮವು ಜ 06 ಶನಿವಾರ ನಡೆಯಿತು.
ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಿಂದ ತೆರೆದ ವಾಹನದಲ್ಲಿ ಬೆಳ್ತಂಗಡಿ ಬಸ್ ನಿಲ್ದಾಣದವರೆಗೆ ಭವ್ಯ ಸ್ವಾಗತ ಮೆರವಣಿಗೆ ನಡೆಯಿತು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮೆರವಣಿಗೆಗೆ ಚಾಲನೆ ನೀಡಿದರು.ಮೆರವಣಿಗೆಯಲ್ಲಿ ರಿಕ್ಷಾ ಚಾಲಕರ ಸಂಘ ರೇಂಜರ್ಸ್ ಅ್ಯಂಡ್ ರೋವರ್ಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದರು. ಮೆರವಣಿಗೆಯ ರಸ್ತೆಯುದ್ದಕ್ಕೂ ದೇಶಾಭಿಮಾನಿ ಜನತೆ ಹೆಮ್ಮೆಯ ಸೈನಿಕನಿಗೆ ಗೌರವ ಸಲ್ಲಿಸಿದರು.
ಬಸ್ ನಿಲ್ದಾಣದ ಬಳಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್, ಮಾತನಾಡಿದೇಶದ ಸೈನಿಕನಾಗಿ ಸೇವೆ ಸಲ್ಲಿಸಿದಕ್ಕಾಗಿ ಸಮಾಜ ಕೃತಜ್ಞತೆಯ ರೀತಿಯಲ್ಲಿ ಭವ್ಯ ಸ್ವಾಗತವನ್ನು ನೀಡಿದೆ ಎಂದು ಶುಭ ಹಾರೈಸಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಹಮ್ಮದ್ ರಫಿ ಅಭಿನಂದಿಸಿ ಶುಭ ಹಾರೈಸಿದರು. ಮೇಜರ್ ಶಿವಕುಮಾರ್ ಮಾತನಾಡಿ ಚಿಕ್ಕ ವಯಸ್ಸಿನಲ್ಲಿ ಸೈನ್ಯಕ್ಕೆ ಸೇರಬೇಕು ಎಂಬ ದೊಡ್ಡ ಆಸೆ ಪಟ್ಟಿದ್ದೆ ಅದರಂತೆ ದೇವರ ಹಾಗೂ ತಂದೆ ತಾಯಿಯವರ ಗುರು ಹಿರಿಯರ ಆಶೀರ್ವಾದದಿಂದ ಕನಸು ಈಡೇರಿಸಿ 28 ವರ್ಷಗಳ ಕಾಲ ಸೇನೆಯಲ್ಲಿ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಹಿಂದಿರುಗುವ ಈ ವೇಳೆಯಲ್ಲಿ ಹುಟ್ಟೂರಿನ ದೇಶಾಭಿಮಾನಿ ಬಂಧುಗಳು ಗೌರವಪೂರ್ವಕವಾಗಿ ಸ್ವಾಗತಿಸಿದ್ದು ನನ್ನ ಜೀವನದಲ್ಲಿ ಮರೆಯಲಾರದ ದಿನ ಇದು ಸೈನಿಕನಿಗೆ ಸಿಗುವ ನಿಜವಾದ ಗೌರವ ಸ್ವಾಗತಿಸಿದ ಎಲ್ಲರಿಗೂ ಚಿರ ಋಣಿ ಎಂದರು.ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಸುನೀಲ್ ಶೆಣೈ, ಶಿವಕುಮಾರ್ ತಾಯಿ ಸುಂದರಿ, ಪತ್ನಿ ಜಯಶ್ರೀ ಸೇರಿದಂತೆ ಕುಟುಂಬಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು. ಅರವಿಂದ ಲಾಯಿಲ ಸ್ವಾಗತಿಸಿ ಪ್ರೇಮ್ ರಾಜ್ ಸಿಕ್ವೇರ ವಂದಿಸಿದರು. ರುಕ್ಮಯ ಕನ್ನಾಜೆ ಕಾರ್ಯಕ್ರಮ ನಿರ್ವಹಿಸಿದರು.