ಬೆಳ್ತಂಗಡಿ: ಕರ್ನಾಟಕ ಗಮಕ ಕಲಾ ಪರಿಷತ್ತು (ರಿ.) ಬೆಂಗಳೂರು, ಗಮಕ ಕಲಾ ಪರಿಷತ್ತು ದ. ಕ ಜಿಲ್ಲೆ, ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ವತಿಯಿಂದ ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ, ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘ ಇವರ ಆಶ್ರಯದಲ್ಲಿ, ಜ.20 ರಂದು ಶನಿವಾರ ಬೆಳಗ್ಗೆ 9.45 ರಿಂದ ಸಂಜೆ ಗಂಟೆ 4.00 ರವರೆಗೆ, ಬೆಳ್ತಂಗಡಿ ತಾಲೂಕು 2ನೇ ಗಮಕ ಸಮ್ಮೇಳನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಜರಗಲಿದೆ.
ಹಿರಿಯ ಗಮಕಿಗಳಾದ ಜಯರಾಮ ಕುದ್ರೆತ್ತಾಯ ಧರ್ಮಸ್ಥಳ ರವರ ಸರ್ವಾಧ್ಯಕ್ಷತೆಯಲ್ಲಿ ಸಮ್ಮೇಳನ ಸಂಪನ್ನಗೊಳ್ಳಲಿದೆ ಎಂದು ದ.ಕ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ಮಧೂರ ಮೋಹನ ಕಲ್ಲೂರಾಯ ರವರು ಜ.15ರಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈಗಾಗಲೆ ಸಮ್ಮೇಳನದ ಪೂರ್ವ ತಯಾರಿಯು ಬೆಳಾಲಿನ ಪ್ರೌಢಶಾಲೆಯ ಪೋಷಕರು. ಹಳೆ ವಿದ್ಯಾರ್ಥಿಗಳು, ಬೆಳಾಲು ಗ್ರಾಮ ಪಂಚಾಯತ್, ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ., ಶ್ರೀ ಮಾಯ ಮಹಾದೇವ ದೇವಸ್ಥಾನ ಬೆಳಾಲು. ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನ ಕೊಲ್ಪಾಡಿ, ಶ್ರೀ ಅನಂತ ಪದ್ಮನಾಭ ದೇವಸ್ಥಾನ ಅನಂತೋಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಗಳಲ್ಲಿ ಯೋಜನೆ ರಿ. ಬೆಳಾಲು ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ರಿ. ಬೆಳಾಲು ಇವರೆಲ್ಲರನ್ನು ಒಗ್ಗೂಡಿಸಿಕೊಂಡು, ವಿವಿಧ ಜವಾಬ್ದಾರಿಗಳನ್ನು ಹಂಚಿಕೊಂಡು ಸಮ್ಮೇಳನದ ಯಶಸ್ಸಿನಲ್ಲಿ ತಯಾರಿ ನಡೆಸಲಾಗುತ್ತಿದೆ.
ಉದ್ಘಾಟನೆ: ಸಮ್ಮೇಳನವು ಉಜಿರೆ ಶ್ರೀ ಧ ಮಂ ಎಜ್ಯುಕೇಶನಲ್ ಸೊಸೈಟಿ (ರಿ.) ಇದರ ಕಾರ್ಯದರ್ಶಿಗಳಾದ ಡಾ. ಎಸ್ ಸತೀಶ್ಚಂದ್ರ ರವರು ಉದ್ಘಾಟನೆ ಮಾಡಲಿದ್ದಾರೆ. ಅತಿಥಿಗಳಾಗಿ ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹಾಗೂ ಬೆಳಾಲು ಗ್ರಾಮ ಪಂಚಾಯತ್ತಿನ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ ಪಿ ಶ್ರೀನಾಥ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ತಾರಾಕೇಸರಿ, ಬೆಳಾಲು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಮತ್ತು ಮಾಯ ಶ್ರೀ ಮಹಾದೇವ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಆದ ಪದ್ಮ ಗೌಡ ಎಚ್. ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ತಾಲೂಕಿನ ಹಿರಿಯ ಗಮಕಿಗಳಾದ ಶ್ರೀಮತಿ ಮನೋರಮ ತೋಳ್ಪಡಿತ್ತಾಯ ಮತ್ತು ಪ್ರವಚನಕಾರರಾದ ಪಿ. ಲಕ್ಷಣ ಗೌಡ ಬೆಳಾಲು ಇವರಿಗೆ ಸನ್ಮಾನ ನಡೆಯಲಿದೆ.
ಗೋಷ್ಠಿಗಳು: ಇಡೀ ಸಮ್ಮೇಳನವು ಹಳೆಗನ್ನಡ ಮತ್ತು ನಡುಗನ್ನಡ ಕಾವ್ಯ ಪರಂಪರೆಯಾಧಾರಿತವಾಗಿದ್ದು ಶೈಕ್ಷಣಿಕ ಮೌಲ್ಯಗಳಿಗೆ ಕೇಂದ್ರೀಕರಿಸಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೊದಲ ಸಂವಾದ ಗೋಷ್ಠಿಯು ಗಮಕ, ಯಕ್ಷಗಾನ – ಶಿಕ್ಷಣ ವಿಷಯದಲ್ಲಿದ್ದು ನಂತರದ ಗೋಷ್ಠಿಗಳೆಲ್ಲವೂ ಶೈಕ್ಷಣಿಕ ಭಾಗವಾಗಿರುವ ಕಾವ್ಯ ಭಾಗಗಳ ಗಮಕ ವಾಚನ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ. ಊಟೋಪಚಾರದ ವ್ಯವಸ್ಥೆಯು ಇದೆ. ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಹೆಚ್ಚು ತೊಡಗಿಸಿಕೊಳ್ಳಲು ಶಿಕ್ಷಣ ಇಲಾಖೆಯವರು ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಮಕ ಕಲಾ ಪರಿಷತ್ತು ಬೆಳ್ತಂಗಡಿ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಭಟ್ ಉಜಿರೆ, ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಚೊಕ್ಕಾಡಿ, ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ಶ್ರೀಮತಿ ಮೇಧಾ ಉಜಿರೆ, ಸದಸ್ಯ ಶ್ರೀನಿವಾಸ ತಂತ್ರಿ ಉಪಸ್ಥಿತರಿದ್ದರು.