ಬೆಳ್ತಂಗಡಿ: ಭಾರತ ಎಂದರೆ ರಾಮ, ರಾಮ ಎಂದರೆ ಅಪೂರ್ವ ಶಕ್ತಿ. ಜ. 22 ರಂದು ರಾಮನ ಜಪದೊಂದಿಗೆ ಸಂಭ್ರಮದಿಂದ ಪ್ರತಿಷ್ಠಾ ದಿನವನ್ನು ಆಚರಣೆ ಮಾಡೋಣ ಎಂದು ಉಡುಪಿ-ಶಂಕರಮಠ ಏಕ ಜಾತಿಧರ್ಮ ದ್ವಾರಕ ಮಾಯಿ ಮಠದ ಶ್ರೀ ಸಾಯಿ ಈಶ್ವರ ಗುರೂಜಿ ನುಡಿದರು.
ಜ.14 ರಂದು ಸಂಜೆ ವೇಣೂರು ಶ್ರೀರಾಮ ಭಜನಾ ಮಂದಿರದಲ್ಲಿ ಅಯೋಧ್ಯಾ ಆಂದೋಲನದಲ್ಲಿ ಭಾಗವಹಿಸಿದ ಕರಸೇವಕರನ್ನು ಗೌರವಿಸಿ ಅವರು ಆಶೀರ್ವದಿಸಿದರು.
ರಾಮಜನ್ಮ ಭೂಮಿಗಾಗಿ ಸುಮಾರು ಮೂರು ಲಕ್ಷ ಮಂದಿ ಪ್ರಾಣತೆತ್ತಿದ್ದಾರೆ. ಹನುಮಂತನ ಶಕ್ತಿ ಕರಸೇವಕರಲ್ಲಿ ಸೇರಿದ ಪರಿಣಾಮವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯವಾದ ಮಂದಿರ ನಿರ್ಮಾಣವಾಗಿದೆ. ರಾಮನ ಜಪ ಸಾರ್ವತ್ರಿಕವಾಗಲಿ ನಿತ್ಯ ನಿರಂತರವಾಗಿರಲಿ ಎಂದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಬ್ರಿಜೇಶ್ ಚೌಟ ಕರಸೇವಕರನ್ನು ಅಭಿನಂದಿಸಿ, ಅಂದಿನ ಪ್ರತಿಕೂಲ ಸನ್ನಿವೇಶದಲ್ಲಿ ಕರಸೇವಕರು ನಿರ್ವಹಿಸಿದ ಪಾತ್ರ ಆದರ್ಶಪ್ರಾಯವಾದದ್ದು. ಸುಮಾರು ೫೦೦ ವರ್ಷಗಳ ಹೋರಾಟವು ಜ. ೨೨ ರಂದು ಅಂತ್ಯ ಕಾಣಲಿದೆ. ವಿಶ್ವವೇ ಕುಟುಂಬ ಎನ್ನುವ ತತ್ವ ನಮ್ಮದು. ಹಿಂದೂ ಸಮಾಜವನ್ನು ಜಾಗೃತ ಮಾಡಿಸುವ ಕೆಲಸ ನಿರಂತರವಾಗಿ ಮಾಡಬೇಕಾಗಿದೆ. ಹಿಂದು ಶಕ್ತಿಯಿಂದ ಹಲವರ ಷಡ್ಯಂತ್ರಗಳಿಗೆ ಕುತ್ತು ಬರಲಿದೆ. ಹೀಗಾಗಿ ಹಿಂದುಗಳು ಎಚ್ಚರದಿಂದ ಇರಬೇಕಾಗಿದೆ ಎಂದರು.
ವೇದಿಕೆಯಲ್ಲಿ ವಿ.ಹಿಂ.ಪ. ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ರಾ.ಸ್ವ.ಸಂಘದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರಕಾಶ್ ಪುರೋಹಿತ, ಉದ್ಯಮಿ ಭಾಸ್ಕರ ಪೈ ಉಪಸ್ಥಿತರಿದ್ದರು.
ಕರಸೇವಕರಾದ ಮಂಜಪ್ಪ ದೇವಾಡಿಗ, ಗಣೇಶ್ ಹೆಗ್ಡೆ ನಾರಾವಿ, ಮೋಹನ ಅಂಡಿಂಜೆ, ಸುರೇಶ ಭಟ್ ಗುಂಡೂರಿ, ಪ್ರಭಾಕರ ಪ್ರಭು, ಶಶಿಧರ ಅಳದಂಗಡಿ, ಶೇಖರ ಶೆಟ್ಟಿ ಗುಂಡೂರಿ, ಎಂ.ಪಿ. ಶೇಖರ ಶಿರ್ಲಾಲು, ಪ್ರಶಾಂತ ಬರಯ, ಕೆ.ವೈ.ಈಶ್ವರ್, ಶ್ರೀನಿವಾಸ ಆಚಾರ್, ರಮೇಶ್ ಪೂಜಾರಿ, ವಸಂತ ಅಳದಂಗಡಿ, ಮಾಧವ ಕಾರಂತ ವೇಣೂರು ಅವರನ್ನು ಸಮ್ಮಾನಿಸಲಾಯಿತು.
ಉಮೇಶ್ ನಡ್ತಿಕಲ್ಲು ಅಯೋಧ್ಯಾ ಆಂದೋಲನದ ವಿವಿಧ ಮಜಲುಗಳನ್ನು ಸಾದ್ಯಂತ ವಿವರಿಸಿದರು. ಪ್ರಭಾಕರ ಪ್ರಭು ಸ್ವಾಗತಿಸಿದರು. ಸತೀಶ್ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.