ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹೊಸ ಡಯಾಲಿಸಿಸ್ ಯಂತ್ರಗಳು ಅಳವಡಿಕೆಯಾದ್ದರಿಂದ ರೋಗಿಗಳಿಗೆ ಉತ್ತಮವಾಗಿ ಡಯಾಲಿಸಿಸ್ ಆಗುತ್ತಿದೆ. ಸರಿಯಿಲ್ಲದ ಡಯಾಲಿಸಿಸ್ ಯಂತ್ರಗಳಿಂದ ಸಮಸ್ಯೆಗಳ ಅಗರವಾಗಿದ್ದ ಆಸ್ಪತ್ರೆಗೆ ಹೊಸ ಯಂತ್ರಗಳನ್ನು ತರಿಸಿಕೊಂಡು ಸಹಕರಿಸಿದ ಉಸ್ತುವಾರಿ ಸಚಿವರು ಹಾಗೂ ಮಾಜಿ ಶಾಸಕ ಕೆ.ವಸಂತ ಬಂಗೇರರರವರು ಡಯಾಲಿಸಿಸ್ ಸಂತ್ರಸ್ತರಾದ ನಮ್ಮ ಪಾಲಿನ ಆಪತ್ಪಾಂಧವರು ಎಂದು ಡಯಾಲಿಸಿಸ್ ಗೆ ಪಡೆಯುತ್ತಿರುವ ಕುವೆಟ್ಟು ಗ್ರಾಮದ ಪಿಲಿಚಾಮುಂಡಿ ನಿವಾಸಿ ಪುರಂದರ ದಾಸ್ ಹೇಳಿದರು.
ಅವರು ಜ.23 ರಂದು ಬೆಳ್ತಂಗಡಿ ಪ್ರವಾಸಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಬೆಳ್ತಂಗಡಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಈ ಹಿಂದೆ ಏಜೆನ್ಸಿ ವಹಿಸಿಕೊಂಡಿದ್ದ ಕಂಪನಿಯವರು ಹಳೆಯ ಕೆಟ್ಟು ಹೋಗಿದ್ದ ಡಯಾಲಿಸಿಸ್ ಯಂತ್ರಗಳಲ್ಲಿ ಡಯಾಲಿಸಿಸ್ ಮಾಡುತ್ತಿದ್ದರು. ಮೂರು ತಿಂಗಳಿಗೊಮ್ಮೆ ಮಿಷಿನ್ ನ ಸರ್ವಿಸ್ ಮಾಡಬೇಕು. ಅವರು ಯಾವುದೇ ಸರ್ವೀಸ್ ಮಾಡದೇ ಇರುವುದರಿಂದ ನಮಗೆ ಹಲವಾರು ತೊಂದರೆಗಳಾಗಿವೆ. ಮಾಜಿ ಶಾಸಕ ವಸಂತ ಬಂಗೇರರವರ ವಿಶೇಷವಾದ ಪ್ರಯತ್ನದಿಂದ ಪ್ರಸ್ತುತ ಡಯಾಲಿಸಿಸ್ ಘಟಕದ ಹೊಸ ಏಜೆನ್ಸಿಯವರಾದ ನೆಫ್ರೋ ಕಂಪನಿಯವರು ಹೊಸದಾಗಿ ಯಂತ್ರಗಳನ್ನು ಅಳವಡಿಸಿದ್ದಾರೆ. ಅಲ್ಲದೆ ಎಲ್ಲಾ ಚುಚ್ಚುಮದ್ದುಗಳು ಮತ್ತು ಮಾತ್ರೆಗಳು ಆರೋಗ್ಯ ಕೇಂದ್ರದಲ್ಲಿಯೇ ದೊರಕುತ್ತಿರುವುದು ನಮ್ಮ ಪಾಲಿಗೆ ಪ್ರಯೋಜನವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಂದರ ದಾಸ್ ಅವರ ಪತ್ನಿ ಗಾಯತ್ರಿ, ಪುಷ್ಪ ಮಾಯಿಲಪ್ಪ ಗೌಡ ಕೌಕ್ರಾಡಿ, ಕಡಬ ಉಪಸ್ಥಿತರಿದ್ದರು.