ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್ ದಾನಿಗಳ ಆರ್ಥಿಕ ಸಹಕಾರದೊಂದಿಗೆ “ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ, ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರ, ವಾಟರ್ ಬ್ಯಾಂಕ್, ಆಸ್ಪತ್ರೆಗಳ ರೋಗಿಗಳಿಗೆ ಅನುಕೂಲವಾಗುವ ಡಯಾಲಿಸಿಸ್ ಯಂತ್ರ, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸೇರಿದಂತೆ ಜನೋಪಯೋಗಿ ಕಾರ್ಯಕ್ರಮಗಳ ಮೂಲಕ ಸಮಾಜಕ್ಕೆ ಮಾದರಿಯಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಹೆಚ್. ಆರ್ ಕೇಶವ್ ಹೇಳಿದರು.
ಅವರು ಬೆಳ್ತಂಗಡಿ ರೋಟರಿಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ವಿಶ್ವದ ಎಲ್ಲಾ ರಾಷ್ಟ್ರಗಳಲ್ಲಿ ರೋಟರಿ ಕ್ಲಬ್‌ಗಳಿದ್ದು, ಸುಮಾರು ೧೪ ಲಕ್ಷ ಸದಸ್ಯರಿದ್ದಾರೆ. ಜಗತ್ತನ್ನು ಕಾಡಿದ ಮಾಹಮಾರಿ ಪೊಲೀಯೋ ನಿರ್ಮೂಲನೆಯಲ್ಲಿ ರೋಟರಿ ಕ್ಲಬ್ ಮಹತ್ತರ ಪಾತ್ರ ವಹಿಸಿದೆ. ಪರಿಸರ ಸಂರಕ್ಷಣೆ ಸೇರಿದಂತೆ ರೋಟರಿ ಕ್ಲಬ್ ಸಮಾಜಕ್ಕೆ ಅನುಕೂಲಕರವಾದ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿದರು.
ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಯಂತ್ರ ಹಸ್ತಾಂತರ
ಬೆಳ್ತಂಗಡಿ ರೋಟರಿ ಕ್ಲಬ್‌ನ ಅಧ್ಯಕ್ಷ ರೊ.ಅನಂತ ಭಟ್ ಮಚ್ಚಿಮಲೆ ಅವರು ಮಾತನಾಡಿ, ಇತ್ತಿಚೇಗೆ ಕುಸಿದು ಬಿದ್ದಿರುವ ಹಳೆಪೇಟೆ ಶಾಲೆ ಕಟ್ಟಡ ನವೀಕರಣಕ್ಕೆ ಸಿ.ಎಸ್.ಆರ್.ಫಂಡ್‌ನಿಂದ ರೂ.25 ಲಕ್ಷ ನೀಡಲಾಗುತ್ತಿದ್ದು, ಇದಕ್ಕೆ ಫೆ.4ರಂದು ಚಾಲನೆ ನೀಡಲಾಗುವುದು. ಕ್ಯಾನ್ ಫಿನ್ ಹೋಮ್ಸ್ ಲಿ ಮತ್ತು ಇಂಟೆಲ್ ಫೌಂಡೇಶನ್, ರೋಟರಿ ಬೆಂಗಳೂರು ಇಂದಿರಾನಗರ, ರೋಟರಿ ಕ್ಲಬ್ ಬೆಳ್ತಂಗಡಿ ಸಹಕಾರದೊಂದಿಗೆ ಸಾಮಾಜಿಕ ಹೊಣೆಗಾರಿಕಾ ನಿಧಿಯಿಂದ ಬೆಳ್ತಂಗಡಿ ತಾಲೂಕು ಆಸ್ಪತ್ರೆಗೆ ಸುಮಾರು 42 ಲಕ್ಷ ವೆಚ್ಚದ 4 ಡಯಾಲಿಸಿಸ್ ಯಂತ್ರಗಳು ಮತ್ತು ಏಳು ಸಾವಿರ ಲೀಟರ್ ಸಾಮರ್ಥ್ಯದ ಆರ್.ಒ ಪ್ಲಾಂಟನ್ನು ಸಾರ್ವಜನಿಕರ ಉಪಯೋಗಕ್ಕಾಗಿ ಹಸ್ತಾಂತರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದ ಮಹಿಳೆಯೊಬ್ಬರಿಗೆ ರೂ7.50 ಲಕ್ಷ ವೆಚ್ಚದ ಮನೆಯನ್ನು ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ರೋಟರಿ ಬೆಂಗಳೂರು ಇಂದಿರಾನಗರ ಮತ್ತು ಕ್ಯಾನ್ ಫಿನ್ ಹೋಮ್ಸ್ ಲಿ. ಸಹಯೋಗದೊಂದಿಗೆ ತಾಲೂಕಿನ ಆರ್ಥಿಕವಾಗಿ ಹಿಂದುಳಿದ 280 ಕ್ಕೂ ಹೆಚ್ಚು ಅರ್ಹ ವಿದ್ಯಾರ್ಥಿಗಳಿಗೆ ಸುಮಾರು 22.26 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನ ನೀಡಲಾಗಿದೆ. ಪರಿಸರ ಸಂರಕ್ಷಣೆ ಬಗ್ಗೆ ವಿಶೇಷ ಕಾರ್ಯಕ್ರಮ “ರೈನೋಥಾನ್ ” ಹಮ್ಮಿಕೊಂಡಿದ್ದೆವು. ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ವಿವಿಧ ಜಾತೀಯ ಹಣ್ಣುಗಳ 10000 ಕ್ಕೂ ಹೆಚ್ಚು ಬೀಜಗಳು ಮತ್ತು 300 ಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. “ಸಾಮಾಜಿಕ ಅರಣೀಕರಣ” ಸಲುವಾಗಿ ಅರಣ್ಯ ಇಲಾಖೆಯ ಜತೆಗೂಡಿ ಸುಮಾರು 1000 ಹಣ್ಣಿನ ಸಸಿಗಳನ್ನು ವಿವಿಧ ಹಾಲು ಉತ್ಪಾದಕರ ಸಹಕಾರಿ ಸಂಘಗಳ ಮೂಲಕ ರೈತರಿಗೆ ವಿತರಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ಜನರ ಆರೋಗ್ಯ ಸಮಸ್ಯೆಯನ್ನು ಮನಗಂಡು ವಿಶೇಷ ತಜ್ಞರನ್ನೊಳಗೊಂಡ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ತಾಲೂಕಿನ ವಿವಿದೆಡೆಗಳಲ್ಲಿ ಆಯೋಜಿಸಲಾಗಿದೆ.ಚರ್ಮಗಂಟು ರೋಗದಿಂದ ಬಳಲುತ್ತಿರುವ ಸುಮಾರು 400 ಪ್ರಾಣಿಗಳಿಗೆ ಉಚಿತವಾಗಿ ಲಸಿಕೆ ವಿತರಣಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅನಿಮಲ್ ಕೇರ್ ಟ್ರಸ್ಟ್ ಶಕ್ತಿನಗರ ಮಂಗಳೂರು ಪಟ್ಟಣ ಪಂಚಾಯತ್ ಬೆಳ್ತಂಗಡಿಯ ಜತೆಗೂಡಿ ದೇಸಿ ನಾಯಿ ಮತ್ತು ಬೆಕ್ಕಿನ ಮರಿಗಳ ಉಚಿತ ದತ್ತುಕೊಡುವ ಶಿಬಿರಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಹಾಗೂ ಜನಮನ್ನಣೆ ದೊರಕಿದೆ ಎಂದರು.
ರೋ| ಧನಂಜಯ ರಾವ್ ಅವರು ಮಾತನಾಡಿ, ಈ ಹಿಂದೆ ವಾಟರ್ ಬ್ಯಾಂಕ್ ಯೋಜನೆಯಲ್ಲಿ ಅಂತರ್ಜಲ ಹೆಚ್ಚಿಸಲು ನೀರಿನ ಕಟ್ಟ ಕಟ್ಟುವ ಕಾರ್ಯಕ್ರಮ ಮಾಡಿದ್ದೇವು. ಇದರಿಂದ ಪ್ರೇರಣೆಗೊಂಡು ನಂತರ ಶಾಸಕ ಹರೀಶ್ ಪೂಂಜ ಅವರು ಪಶ್ಚಿಮವಾಹಿನಿ ಯೋಜನೆಯಲ್ಲಿ ತಾಲೂಕಿನಲ್ಲಿ ಆನೇಕ ಚೆಕ್‌ಡ್ಯಾಮ್ ನಿರ್ಮಾಣ ಯೋಜನೆಯನ್ನು ಹಮ್ಮಿಕೊಂಡಿದ್ದರು. ರೋಟರಿ ಕ್ಲಬ್‌ನಿಂದ ಅಂತರ್ಜಲ ಹೆಚ್ಚಿಸುವ ಕಾರ್ಯಕ್ರಮವನ್ನು ನಾವು ನಡೆಸುತ್ತಿದ್ದೆ. ನಮಲ್ಲಿ ಹತ್ತು ಮಂದಿ ಕೃಷಿಕರಿದ್ದಾರೆ ಹಡೀಲು ಭೂಮಿಯನ್ನು ಬೇಸಾಯ ಮಾಡಿ, ಅದರಲ್ಲಿ ನೀರು ನಿಲ್ಲುವ ವ್ಯವಸ್ಥೆ ಮಾಡುತ್ತಿದ್ದೇವೆ. ಅಧ್ಯಕ್ಷ ಮಚ್ಚಿಮಲೆಯವರು ಎಕ್ರೆ ಜಾಗದ ಅಡಿಕೆ ಮರ ಕಡಿದು ಗದ್ದೆ ಮಾಡಿದ್ದಾರೆ. ನಮ್ಮಲ್ಲೂ ಎಕ್ರೆ ಜಾಗ ಗದ್ದೆ ಇದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು ಉಪಸ್ಥಿತರಿದ್ದರು.