April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿಬೆಳ್ತಂಗಡಿವರದಿ

ಲಾಯಿಲ ಗ್ರಾಮ ಪಂಚಾಯತ್ ವಾರ್ಡ್ ಸಭೆಯಲ್ಲಿ ಗ್ರಾಮಸ್ಥರ ಆಕ್ರೋಶ

ಬೆಳ್ತಂಗಡಿ: ಲಾಯಿಲ ಗ್ರಾಮದ ಪಡ್ಲಾಡಿಯ ನೇತಾಜಿ ಬಡಾವಣೆ ನಿವೇಶನ ಮೀಸಲಿಟ್ಟ ಜಮೀನಿನಲ್ಲಿ ಹಂಚಿಕೆಯಾಗಿ ಉಳಿದ ಸರ್ಕಾರಿ ಜಮೀನಿನಲ್ಲಿ , ಅನಧಿಕೃತವಾಗಿ ಮನೆಗಳ ನಿರ್ಮಾಣ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಅಕ್ರಮ ಮನೆಗಳನ್ನು ತಕ್ಷಣ ತೆರವು ಮಾಡಬೇಕು ಎಂದು ಒಕ್ಕೊರಲ ನಿರ್ಣಯ ಕೈಗೊಂಡ ಘಟನೆ ಲಾಯಿಲ ಗ್ರಾಮದ ಒಂದನೇ ವಾರ್ಡ್ ನ ವಾರ್ಡ್ ಸಭೆಯಲ್ಲಿ ನಡೆಯಿತು.

ಲಾಯಿಲ ಗ್ರಾಮದ ಒಂದನೇ ವಾರ್ಡ್ ನ ವಾರ್ಡ್ ಸಭೆ ಫೆ 05 ರಂದು ಹಿ.ಪ್ರಾ ಶಾಲೆ ಲಾಯಿಲ ಇಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಎಂ.ಕೆ ರವರ ಅಧ್ಯಕ್ಷತೆಯಲ್ಲಿ ಜರುಗಿತ್ತು.

ಸಭೆಯ ಆರಂಭದಲ್ಲಿ ಗ್ರಾಮಸ್ಥರು ಸರ್ಕಾರಿ ಜಮೀನು ರಕ್ಷಣೆ ಮಾಡಬೇಕಾದ ಇಲಾಖೆಗಳ ಅಧಿಕಾರಿಗಳು ಅಕ್ರಮ ಮನೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಸರ್ಕಾರಿ ಜಮೀನು ಒತ್ತುವರಿ ತಡೆಯಲು ವಿಫಲವಾಗಿದ್ದಾರೆ , ಮುಂದಿನ ಗ್ರಾಮಸಭೆಯ ಒಳಗಡೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಗ್ರಾಮಸಭೆಯಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಗ್ರಾಮಸ್ಥರ ನ್ಯಾಯಯುತ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಸರ್ಕಾರಿ ಜಮೀನು ಉಳಿಸುವ ಹೋರಾಟ ನ್ಯಾಯಯುತವಾಗಿದೆ ಎಂದರು. ನೇತಾಜಿ ಬಡಾವಣೆಯಲ್ಲಿ ಬಡವರಿಗಾಗಿ ಹಂಚಿಕೆಯಾದ ನಿವೇಶನಗಳನ್ನು ಅನಧಿಕೃತವಾಗಿ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಶೇಖರ್ ಲಾಯಿಲ ಒತ್ತಾಯಿಸಿದರು.

ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಸರಬರಾಜುಗಾಗಿ ನಿರ್ಮಾಣ ಮಾಡಲಾದ ಟ್ಯಾಂಕ್ ನ ಕಳಪೆ ಮಟ್ಟದ ಕಾಮಗಾರಿಯ ಆರೋಪ , ಬೋರ್ವೆಲ್ ಗಳ ವಿಫಲತೆ , ಪೈಪ್ ಲೈನ್ ಕಾಮಗಾರಿಯ ಕಳಪೆ ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ವಿತರಣೆಯ ವಿಳಂಬ ಧೋರಣೆಯನ್ನು ಗ್ರಾಮಸ್ಥರು ಬಲವಾಗಿ ವಿರೋಧಿಸಿ ಕಳಪೆ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಅವರನ್ನು ಕರೆಯಿಸಿ ಗುಣಮಟ್ಟದ ಬಗ್ಗೆ ತನಿಖೆ ನಡೆಸಿ ಮಾಹಿತಿ ಪಡೆಯಲು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರಸಾದ್ ಶೆಟ್ಟಿ ಯವರು ನೇತಾಜಿ ಬಡಾವಣೆಯ ಟ್ಯಾಂಕ್ ಕಾಮಗಾರಿಯ ಕಳಪೆ ಗುಣಮಟ್ಟದ ಬಗ್ಗೆ ಸಂಬಂಧಪಟ್ಟ ಇಂಜಿನಿಯರ್ ಈಗಾಗಲೇ ತನಿಖೆ ನಡೆಸಿದ್ದಾರೆ. ಕಾಮಗಾರಿ ಮುಗಿದ ತಕ್ಷಣ ಮತ್ತೊಮ್ಮೆ ಪರಿಶೀಲನೆ ನಡೆಸಿ ಇಂಜಿನಿಯರ್ ಅವರಿಂದ ಗುಣಮಟ್ಟದ ಪ್ರಮಾಣಪತ್ರ ಪಡೆಯಲಾಗುವುದು ಎಂದರು. ಲಾಯಿಲ ಅಂಗನವಾಡಿ ಬಳಿ ನಿರ್ಮಾಣ ಮಾಡಲಾಗಿರುವ ಕುಡಿಯುವ ನೀರಿನ ಶೆಡ್ ಬಗ್ಗೆ ವಿಷಯ ಪ್ರಸ್ತಾಪಿಸಿ ಅದರ ನಿರುಪಯುಕ್ತತೆಯ ಬಗ್ಗೆ ಸೇರಿದಂತೆ ವಾರ್ಡಿನ ಮೂಲಭೂತ ಸೌಕರ್ಯಗಳಿಗೆ ಹಾಗೂ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಗ್ರಾಮ ಪಂಚಾಯತ್ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದಾರಿದೀಪ ಇದ್ದರೂ ಅನಗತ್ಯವಾಗಿ ಹೈಮಾಸ್ಕ್ ದೀಪ ಅಳವಡಿಸಿದ ಬಗ್ಗೆ ವ್ಯಾಪಕ ಚರ್ಚೆಗೆ ಉತ್ತರಿಸಿದ ಅಧ್ಯಕ್ಷೆ ಜಯಂತಿ ರವರು ಅನಗತ್ಯವಾಗಿದ್ದಲ್ಲಿ ಅದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಯಾವುದೇ ಕಾಮಗಾರಿಗಳು ಮಂಜೂರುಗೊಂಡು ಕೆಲಸ ಪ್ರಾರಂಭಿಸುವ ಮೊದಲು ಗ್ರಾಮ ಪಂಚಾಯತ್ ಸದಸ್ಯರ ಗಮನಕ್ಕೆ ತರಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ನಿನ್ನಿಕಲ್ಲು- ಚಂದ್ಕೂರು ತನಕವೂ ದಾರಿದೀಪ ಅಳವಡಿಕೆ , ಬಜಕ್ರೆಸಾಲು- ಅಂಕಾಜೆ ರಸ್ತೆ ಮರುಡಾಮರೀಕರಣ , ಪುಲ್ತಡ್ಕ ಪುದ್ದೊಟ್ಟು ರಸ್ತೆ , ಲಾಯಿಲ ಸ್ಮಶಾನದಿಂದ ಲಾಯಿಲಬೈಲು , ಗಾಣದಕೊಟ್ಯ ರಸ್ತೆ ಡಾಮರೀಕರಣ , ವೈಜ್ಞಾನಿಕ ರೀತಿಯಲ್ಲಿ ಮನೆ ತೆರಿಗೆಯಂತೆ ವಾಣಿಜ್ಯ ಕಟ್ಟಡಗಳಿಗೂ ತೆರಿಗೆ , ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿರುವ ವಾಣಿಜ್ಯ ಕಟ್ಟಡಗಳ ಮೇಲೆ ಕ್ರಮ , ವಾರ್ಡ್, ಗ್ರಾಮಸಭೆಗಳ ನಿರ್ಣಯ ಜಾರಿ , ನಿರ್ಣಯಕ್ಕೆ ಬೆಲೆ ನೀಡದ ತಾಲೂಕು ಮಟ್ಟದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ವ್ಯಾಪಕ ಚರ್ಚೆ ನಡೆಸಲಾಯಿತು. ವಾರ್ಡ್ ಸಭೆಗೆ ಸತತ ಗೈರುಹಾಜರಾಗುವ ಸದಸ್ಯರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಜನರ ಸಮಸ್ಯೆಗಳನ್ನು ಪರಿಹರಿಸಲು ವಿಫಲರಾಗಿದ್ದು ಅವರ ಖಂಡನಾ ನಿರ್ಣಯ ಕೈಗೊಳ್ಳುವಂತೆ ಆಗ್ರಹಿಸಿದರು.

ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಸುಗಂಧಿ ಜಗನ್ನಾಥ್ , ಲೆಕ್ಕಾಧಿಕಾರಿ ಶ್ರೀಮತಿ ಸುಪ್ರಿತಾ, ಪಂಚಾಯತ್ ಸಿಬ್ಬಂದಿ ವಾರೀಜಾ ಉಪಸ್ಥಿತರಿದ್ದರು.

Related posts

ಬೆಳಾಲು ಶ್ರೀ ಮಂಜುನಾಥೇಶ್ವರ ಪ್ರೌಢ ಶಾಲೆಯಲ್ಲಿ “ವೃತ್ತಿ ಮಾರ್ಗದರ್ಶನ” ಕಾರ್ಯಕ್ರಮ

Suddi Udaya

ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಹ್ಮಣ್ಯ ಭಟ್ ನಾಮಪತ್ರ ಸಲ್ಲಿಕೆ

Suddi Udaya

ಕಣಿಯೂರು: ದೀಪಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಬರೆಂಗಾಯ ಸ.ಉ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ ಕಾರ್ಯಕ್ರಮ

Suddi Udaya

ಬೆಳ್ತಂಗಡಿ: 13ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ

Suddi Udaya

ಮರೋಡಿ: ಕೂಕ್ರಬೆಟ್ಟು ಶಾಲೆಗೆ “ಸರಕಾರಿ ಶಾಲೆ ಉಳಿಸಿ ಬೆಳೆಸಿ” ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ಭೇಟಿ

Suddi Udaya
error: Content is protected !!