ಬೆಳ್ತಂಗಡಿ: ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಹಾಗೂ ಸುವರ್ಣ ಆರ್ಕೆಡ್ ಬೆಳ್ತಂಗಡಿ ಅರ್ಪಿಸುವ 14ನೇ ವರ್ಷದ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಫೆ.20 ರಂದು ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ನಡೆಯಲಿದೆ ಎಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ ತಿಳಿಸಿದ್ದಾರೆ.
ನಾಡಿನ ಸಾಧಕರಿಗೆ ‘ಸುವರ್ಣರಂಗ’ ಸನ್ಮಾನ ಸಾಂಸ್ಕೃತಿಕ ಕ್ಷೇತ್ರದ ಮೇರು ಸಾಧಕರನ್ನು ಗುರುತಿಸಿ, ಅವರ ಕಲಾಸೇವೆಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿಷ್ಠಾನವು ಪ್ರತಿವರ್ಷ ‘ಸುವರ್ಣ ರಂಗ ಸಮ್ಮಾನ್’ ಗೌರವ ಪುರಸ್ಕಾರವನ್ನು ನೀಡುತ್ತಿದೆ.
ಈ ಬಾರಿಯ ಪ್ರಶಸ್ತಿಯನ್ನು ಕರಾವಳಿಯ ಗಂಡುಕಲೆ ಯಕ್ಷಗಾನ ಕ್ಷೇತ್ರದ ಖ್ಯಾತ ಭಾಗವತರಾದ ಶ್ರೀಮತಿ ಕಾವ್ಯಶ್ರೀ ಅಜೇರು, ಪ್ರಸಿದ್ದ ದೈವ ನರ್ತಕರು ಮತ್ತು ಸಿವಿಲ್ ಇಂಜಿನಿಯರ್ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ರವೀಶ್ ಪಡುಮಲೆ, ಕಲಾ ಪೋಷಕರು ಮತ್ತು ಸಾಂಸ್ಕೃತಿಕ ಸಂಘಟಕರಾದ ಭುಜಬಲಿ ಬಿ ಧರ್ಮಸ್ಥಳ ಅವರಿಗೆ ನೀಡಲಾಗುತ್ತದೆ.
ಈ ತನಕ ಕನ್ನಡ ಚಿತ್ರ ರಂಗದ ಹಿರಿಯ ಅಭಿನೇತ್ರಿ ಲೀಲಾವತಿ, ಕಿರುತೆರೆ ನಿರ್ದೇಶಕ ವಿನು ಬಳಂಜ, ಸಾಂಸ್ಕೃತಿಕ ಸಂಘಟಕ ಡಾ.ಎಂ. ಮೋಹನ ಆಳ್ವ, ಭಾಗವತ ಸತೀಶ್ ಶೆಟ್ಟಿ ಪಟ್ಲ, ಯಕ್ಷಗಾನ ಕಲಾವಿದ ಕುಂಬ್ಳೆ ಸುಂದರ ರಾವ್, ರಂಗನಟರಾದ ಭೋಜರಾಜ್ ವಾಮಂಜೂರು, ಅರವಿಂದ ಬೋಳಾರ್, ಸುಂದರ ರೈ ಮಂದಾರ, ರಂಗನಟ, ನಿರ್ದೇಶಕ ದೇವದಾಸ್ ಕಾಪಿಕಾಡ್, ಯಕ್ಷಗಾನ ಭಾಗವತ ಜನ್ಸಾಲೆ ರಾಘವೇಂದ್ರ ಆಚಾರ್ ಮತ್ತು ಪಂಚಭಾಷಾ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ,ಖ್ಯಾತ ರಂಗಭೂಮಿ ಕಲಾವಿದ ನವೀನ್ ಡಿ ಪಡೀಲ್,ಯಕ್ಷಗಾನ ಭಾಗವತ ರವಿಚ್ಚಂದ್ರ ಕನ್ನಡಿಕಟ್ಟೆ ಅವರಿಗೆ ನೀಡಲಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 7:00ಕ್ಕೆ ಯಕ್ಷ-ಗಾನ-ವೈಭವ ನಡೆಯಲಿದ್ದು ಹಿಮ್ಮೇಳದಲ್ಲಿ ಭಾಗವತರಾಗಿ ರವಿಚಂದ್ರ ಕನ್ನಡಿಕಟ್ಟೆ, ಶ್ರೀಮತಿ ಕಾವ್ಯಶ್ರೀ ಅಜೇರು, ಚೆಂಡೆ ಮದ್ದಳೆಯಲ್ಲಿ ಚಂದ್ರಶೇಖರ್ ಆಚಾರ್ಯ ಗುರುವಾಯನಕೆರೆ, ಶಿತಿಕಂಠ ಭಟ್ ಉಜಿರೆ ಭಾಗವಹಿಸಲಿದ್ದಾರೆ. ರಾತ್ರಿ ಗಂಟೆ 8:00ರಿಂದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದೆರ್, ಮಂಜೇಶ್ವರ ಅಭಿನಯಿಸುವ ” ಕಲ್ಜಿಗದ ಮಾಯ್ಕಾರೆ ಪಂಜುರ್ಲಿ ” ತುಳು ಪೌರಾಣಿಕ ಮತ್ತು ಸಾಮಾಜಿಕ ಭಕ್ತಿ ಪ್ರಧಾನ ನಾಟಕ ನಡೆಯಲಿದೆ ಎಂದು ತಿಳಿಸಿದರು.