ವೇಣೂರು: ವೇಣೂರಿನಲ್ಲಿ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಫೆ.22 ರಿಂದ ಮಾರ್ಚ್ ಒಂದರ ವರೆಗೆ ಮಹಾಮಸ್ತಕಾಭಿಷೇಕ ನಡೆಯಲಿದ್ದು, ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಫೆ.17ರಂದು ವೇಣೂರಿನ ಯಾತ್ರಿನಿವಾಸದಲ್ಲಿ ವಿವಿಧ ಸಮಿತಿಗಳ ಜೊತೆ ಸಮಾಲೋಚನೆ ನಡೆಸಿ ಸಕಾಲಿಕ ಮಾರ್ಗದರ್ಶನ ನೀಡಿದರು.
ಸರ್ವರ ಸಹಕಾರದೊಂದಿಗೆ ಮಹಾಮಸ್ತಕಾಭಿಷೇಕ ಯಶಶ್ವಿಯಾಗಿ ಧರ್ಮಪ್ರಭಾವನೆಯಾಗಲಿ ಎಂದು ಅವರು ಹಾರೈಸಿದರು.
ಅಭಿಷೇಕ ಸಮಿತಿ, ಪೂಜಾಸಮಿತಿ, ಆಹಾರಸಮಿತಿ, ಮಹಿಳಾಸಮಿತಿ ಮೊದಲಾದ ವಿವಿಧ ಸಮಿತಿಗಳ ಜೊತೆ ಸಮಾಲೋಚನೆ ನಡೆಸಿದ ಪೂಜ್ಯ ಸ್ವಾಮೀಜಿಯವರು ಸೂಕ್ತ ಮಾರ್ಗದರ್ಶನ ನೀಡಿದರು.
ಮಸ್ತಕಾಭಿಷೇಕಕ್ಕೆ ಬೇಕಾದ ಪೂಜ್ಯದ್ರವ್ಯಗಳನ್ನು ಉಚಿತ ಕೊಡುಗೆಯಾಗಿ ನೀಡಿದ ತುಮಕೂರಿನ ಉದ್ಯಮ ರಾಜೇಂದ್ರ ಕುಮಾರ್ ಅವರನ್ನು ಸ್ವಾಮೀಜಿಯವರು ಗೌರವಿಸಿ ಆಶೀರ್ವದಿಸಿದರು.
ಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲ ಅಧ್ಯಕ್ಷತೆ ವಹಿಸಿದರು.
ಸರ್ಕಾರದ ವತಿಯಿಂದ ಮಾರ್ಗದರ್ಶಿಅಧಿಕಾರಿ ಮೂಡಬಿದ್ರೆಯ ಮಾಣಿಕ್ಯ, ಎಂ. ಮಸ್ತಕಾಭಿಷೇಕ ಸಮಿತಿಯ ಪ್ರಧಾನಕಾರ್ಯದರ್ಶಿ ಪ್ರವೀಣಕುಮಾರ್ ಇಂದ್ರ, ಕೋಶಾಧಿಕಾರಿ ಜಯರಾಜ ಕಂಬಳಿ, ವಿಕಾಸ್ ಜೈನ್ ಪೆರಿಂಜೆ ಉಪಸ್ಥಿತರಿದ್ದರು.
ಸಾಮೂಹಿಕ ಪಂಚನಮಸ್ಕಾರ ಮಂತ್ರ ಪಠಣದೊಂದಿಗೆ ಪ್ರಾರಂಭವಾದ ಸಭೆಯಲ್ಲಿ ಮಹಾವೀರ ಜೈನ್ ಮೂಡುಕೋಡಿಗುತ್ತು ಕಾರ್ಯಕ್ರಮ ನಿರ್ವಹಿಸಿದರು.