27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ನಡ ಗ್ರಾಮದಲ್ಲಿ ಸನ್‌ರಾಕ್ ಬಲಿಪ ರೆಸಾರ್ಟ್ ಶುಭಾರಂಭ

ಬೆಳ್ತಂಗಡಿ: ತಾಲೂಕಿನ ಪ್ರವಾಸಿ ಸ್ಥಳಗಳಿಗೆ ತೆರಳುವ ರಸ್ತೆಗಳನ್ನು ನನ್ನ ಕಳೆದ ಶಾಸಕತ್ವದ ಅವಧಿಯಲ್ಲಿ ಅಭಿವೃದ್ಧಿಪಡಿಸಿ ಜನತೆಗೆ ಕೊಡುಗೆಯಾಗಿ ನೀಡಲಾಗಿದ್ದು, ಇದೀಗ ಕೇಂದ್ರ ಸರಕಾರದ ನೆರವಿನಿಂದ ಕರಾವಳಿ ಕರ್ನಾಟಕದ ಮಂಗಳೂರನ್ನು ಸಂಪರ್ಕಿಸಲು ಎಲ್ಲ ಕಡೆಗಳಿಂದ ರಾಷ್ಟ್ರೀಯ ಹೆದ್ದಾರಿಗಳು ಸಿದ್ದವಾಗುತ್ತಿದೆ. ಇನ್ನೆರಡು ವರ್ಷದಲ್ಲಿ ಬೆಂಗಳೂರಿನ ಐಟಿ ಕ್ಷೇತ್ರ ಉದ್ಯೋಗಿಗಳು ವಾರಾಂತ್ಯದಲ್ಲಿ ಜಿಲ್ಲೆಗೆ ಅತೀ ಸರಳವಾಗಿ ತಲುಪುವ ಕೊಂಡಿಯಾಗಿ ಅಭೂತಪೂರ್ವ ಪರಿವರ್ತನೆ ಕಾಣಲಿದ್ದೇವೆ ಎಂದು ಶಾಸಕ ಹರೀಶ್ ಪೂಂಜ ವಿಶ್ವಾಸ ವ್ಯಕ್ತಪಡಿಸಿದರು.

ನಡ ಗ್ರಾಮದ ಮಂಜೊಟ್ಟಿ ಸನ್‌ರಾಕ್ ರೆಸಾರ್ಟ್ ಆವರಣದಲ್ಲಿ ನೂತನವಾಗಿ ಪ್ರಾರಂಭಿಸಿರುವ “ಸನ್‌ರಾಕ್ ಬಲಿಪ ರೆಸಾರ್ಟ್” ಇದರ ಉದ್ಘಾಟನೆಯನ್ನು ಫೆ.24 ರಂದು ನೆರವೇರಿಸಿ ಅವರು ಮಾತನಾಡಿದರು‌.

ಒತ್ತಡದಿಂದ ಜೀವನ ಸಾಗಿಸುತ್ತಿರುವ ಜನತೆಗೆ ವಾರಾಂತ್ಯ ಸುಂದರವಾಗಿಸಲು ಇಂತಹಾ ರೆಸಾರ್ಟ್‌ಗಳು ಅನುಕೂಲದಾಯಕ. ತಾಲೂಕಿನಲ್ಲಿರುವ ಪ್ರಕೃತಿ‌ರಮಣೀಯತೆ ಮತ್ತು ಶ್ರದ್ಧಾ ಕೇಂದ್ರಗಳ ಮೂಲಕ ಇಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶದವಿದ್ದು, ಸರಿಯಾದ ಸಮಯದಲ್ಲಿ ಮುರಳಿ ಬಲಿಪ ಅವರು ಇದಕ್ಕೆ ಅಡಿಪಾಯ ಹಾಕಿದ್ದಾರೆ. ಆದ್ದರಿಂದ ಈ ರೆಸಾರ್ಟ್ ಗೆ ಭವಿಷ್ಯವಿದೆ ಎಂದು ಭರವಸೆ ತುಂಬಿದರು.


ದೇಹಕ್ಕೆ ವ್ಯಾಯಾಮ ಕೊಡುವಂತೆ ಮನಸ್ಸಿಗೂ ಕೊಡಬೇಕು

ನಿರಂತರ ಒತ್ತಡದಿಂದ ಬದುಕುವ ಇಂದಿನ ಸಮೂಹ ದೇಹಕ್ಕೆ ವ್ಯಾಯಾಮ ಕೊಡಲು ಪ್ರಯತ್ನಿಸುತ್ತದೆ. ಆದರೆ ಮನಸ್ಸಿಗೆ ಕೊಡುವುದಿಲ್ಲ. ಇತರ ದೇಶ ಸುತ್ತಿದಾಗ ಆಧ್ಯಾತ್ಮ ನಮ್ಮ ದೇಶದ ಶಕ್ತಿ ಎಂಬುದರ ಅರಿವು ನಮಗಾಗುತ್ತದೆ. ಪ್ರಕೃತಿ ಪ್ರೇಮದ ಜೊತೆಗೆ ನಾವೆಲ್ಲ ಆಧ್ಯಾತ್ಮಿಕದ ಅನುಭೂತಿಯ ಮೂಲಕ ನೆಮ್ಮದಿಯ ದಿನಗಳನ್ನು ತಂದುಕೊಳ್ಳೋಣ ಎಂದು ವಿಧಾನ ಪರಿಷತ್‌ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

‘ತಾಲೂಕಿನ ರಮಣೀಯತೆಯನ್ನು ಹೊರ ಪ್ರಪಂಚಕ್ಕೆ ತೋರಿಸುವ ಕೆಲಸ ಮಾಡುತ್ತೇವೆ

ನಾವು ಕುಟುಂಬ ಸಮೇತರಾಗಿ ಬೇರೆಡೆಗೆ ಪ್ರವಾಸ ಕೈಗೊಂಡಿದ್ದಾಗ ಅಲ್ಲಿ ಅಷ್ಟೊಂದು ಪ್ರಭಾವಿತ ಸ್ಥಳವಲ್ಲದಿದ್ದರೂ ಸಾವಿರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿ ಸಂಭ್ರಮಪಡುತ್ತಿದ್ದುದನ್ನು ನೋಡಿ ಆಶ್ಚರ್ಯಗೊಂಡಿದ್ದೆ. ನಮ್ಮೂರಿನ‌ ಸುತ್ತಮುತ್ತ ಇರುವ ಪ್ರಕೃತಿರಮಣೀಯತೆಯನ್ನು, ಜಲಪಾತ ಹಾಗೂ ಸರ್ವಧರ್ಮೀಯ ಶ್ರದ್ಧಾ ಕೇಂದ್ರಗಳ ವೀಕ್ಷಣೆಯ ಅವಕಾಶವನ್ನು ಪ್ರವಾಸೋದ್ಯಮ ಬೇರಾಗಿ ಯಾಕೆ ಮಾಡಬಾರದು ಎಂಬುದಾಗಿ ಅಲ್ಲಿಂದಲೇ ಮೂಲ ಪ್ರೇರಣೆ ಪಡೆದು ಈ ಸಾಹಸಕ್ಕೆ ಕೈ ಹಾಕಿದ್ದೇನೆ. ನಮ್ಮ ಈ
“ಬಲಿಪ ರೆಸಾರ್ಟ್” ಕೇವಲ ಲಾಭ ಗಳಿಸುವ ಗುರಿ ಮಾತ್ರ‌ ಹೊಂದದೆ ತಾಲೂಕಿನ ಧಾರ್ಮಿಕ ಮತ್ತು ಪ್ರಾಕೃತಿಕ ಸೊಬಗನ್ನು ಇತರರಿಗೆ ಪರಿಚಯಿಸುವ ಮಹದಾಶಯ ಹೊಂದಿದೆ. ತಾಲೂಕಿಗೆ ಆಗಮಿಸುವವರಿಗೆ ಎಲ್ಲಾ ಮೂಲಸೌಕರ್ಯದೊಂದಿಗೆ ಹೊರಸಂಚಾರ ಪ್ರವಾಸವನ್ನೂ ಕೈಗೊಳ್ಳುವ ಮೂಲಕ ಇದನ್ನು ಬೆಳೆಸಲಿದ್ದೇವೆ ಎಂದು ಬಲಿಪ ರೆಸಾರ್ಟ್ ಮಾಲಕರು ಮುರಳಿ‌ ಬಲಿಪ ತಿಳಿಸಿದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಧಕ, ತೂಗು ಸೇತುವೆಗಳ ಸರದಾರ ಡಾ. ಗಿರೀಶ ಭಾರದ್ವಾಜ್ ಸುಳ್ಯ, ಅಖಿಲ ಭಾರತ ಬ್ಯಾರಿ ಪರಿಷತ್ ಅಧ್ಯಕ್ಷ ಯು. ಹೆಚ್ ಖಾಲಿದ್ ಉಜಿರೆ, ಹಿರಿಯ ನ್ಯಾಯವಾದಿ ಬಿ.ಕೆ ಧನಂಜಯ ರಾವ್, ನಡ ಗ್ರಾ.ಪಂ ಅಧ್ಯಕ್ಷೆ ಮಂಜುಳಾ, ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ, ಬಲಿಪ ಕುಟುಂಬಸ್ತರಾದ ಶಶಿಧರ ಬಲಿಪ, ಸನ್‌ರಾಕ್ ಸಮೂಹ‌ ಸಂಸ್ಥೆಗಳ ಮಾಲಕ ಡೆನಿಸ್ ವಾಲ್ಟರ್ ಸಿಕ್ವೇರ, ಮುರಳಿ ಅವರ ಧರ್ಮಪತ್ನಿ ಮನೋರಮಾ ಎಂ ಬಲಿಪ, ಪುತ್ರ ಮಂದಾರ ಬಲಿಪ, ಸನ್ ರಾಕ್ ಸಮೂಹ ಸಂಸ್ಥೆ ಮಾಲಕರಾದ ವಾಲ್ಟರ್ ಸಿಕ್ವೇರಾ ಉಪಸ್ಥಿತರಿದ್ದರು.

ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ನಿರೂಪಿಸಿದರು. ರೀಷನ್ ಸಿಕ್ವೇರ ವಂದಿಸಿದರು.

ಪ್ರಕೃತಿ ಪ್ರೇಮದ ಸಂಕೇತವಾಗಿ ಎಲ್ಲಾ ಅತಿಥಿಗಳಿಗೆ ಆಂಥೋರಿಯಂ ಗಿಡವನ್ನು ಸ್ಮರಣಿಕೆಯಾಗಿ ನೀಡಲಾಯಿತು. ಉದ್ಘಾಟನೆಯ ಅಂಗವಾಗಿ ರೆಸಾರ್ಟ್ ಒಳಗೆ ಸರ್ವರಿಗೂ ಉಚಿತ ಪ್ರವೇಶದೊಂದಿಗೆ ಬಗೆ ಬಗೆಯ ತಿಂಡಿ ತಿನಿಸುಗಳನ್ನು ಸವಿಯುವ ಅವಕಾಶ ಹಾಗೂ ಮಕ್ಕಳಿಗೆ ಮತ್ತು ಹಿರಿಯರಿಗೆ ಈಜು ಕೊಳ ಮತ್ತು ಎಡ್ವೆಂಚರ್ ಆಟಗಳನ್ನು ಬಳಸುವ ಅವಕಾಶ ಒದಗಿಸಲಾಗಿತ್ತು.

Related posts

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಪುನರಾಯ್ಕೆ

Suddi Udaya

ಪ್ರಸನ್ನ ಕಾಲೇಜ್ ಆಫ್ ಫಾರ್ಮಸಿ ವಿದ್ಯಾರ್ಥಿಗಳ ಉತ್ತಮ ಸಾಧನೆ

Suddi Udaya

ಉಜಿರೆ: ಅನುಗ್ರಹ ಶಾಲಾ ಶಿಕ್ಷಕರಿಗೆ ಕಾರ್ಯಾಗಾರ

Suddi Udaya

ಜೆಸಿಐ ಭಾರತದ ರಾಷ್ಟ್ರೀಯ ಅಧ್ಯಕ್ಷ ಸಿ.ಆರ್ ರಿಕೇಶ್ ಶರ್ಮಾ ಬಳಂಜ ಶಾಲೆಗೆ ಭೇಟಿ, ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ವತಿಯಿಂದ ಬಳಂಜ ಶಾಲೆಗೆ ರೂ.1ಲಕ್ಷ ಮೊತ್ತದ ಯೋಜನೆಗಳ ಹಸ್ತಾಂತರ

Suddi Udaya

ಫೆ.24: ಗುರುವಾಯನಕೆರೆಯಲ್ಲಿ ನಿಸರ್ಗ ಆರ್ಕೇಡ್ ಲೋಕಾರ್ಪಣೆ

Suddi Udaya

ಬಂದಾರು: ಕುಂಟಾಲಪಲ್ಕೆ ನಿವಾಸಿ ಜಾರಪ್ಪ ನಿಧನ

Suddi Udaya
error: Content is protected !!