ಬೆಳ್ತಂಗಡಿ: ಕೆ ಟಿ ಗಟ್ಟಿಯವರದು ಸ್ವಯಂ ಪ್ರತಿಭೆ. ಸ್ವ ಅಧ್ಯಯನ, ಜೀವನಾನುಭವ, ವೃತ್ತಿ ಅನುಭವದ ಹಿನ್ನೆಲೆಯ ಬರವಣಿಗೆಯಾಗಿದೆ. ಅವರ ವೈಚಾರಿಕ ನಿಲುವುಗಳ ಬರವಣಿಗೆಗಳು ನೇರ ನಿಷ್ಠರವಾಗಿದ್ದರೂ ಪ್ರಸ್ತುತ ಕಾಲಮಾನದ ಸಾಮಾಜಿಕ ರಾಜಕೀಯ ಮತ್ತು ಶೈಕ್ಷಣಿಕ ಸ್ಥಿತಿಗತಿಯ ವಿಶ್ಲೇಷಣೆಯೂ ಮಾರ್ಗದರ್ಶಕವೂ ಆಗಿದೆ ಎಂದು ವಾಣಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಮಹಾಬಲ ಗೌಡರವರು ಅಭಿಪ್ರಾಯ ಪಟ್ಟರು.
ಅವರು ಬೆಳ್ತಂಗಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ, ವಾಣಿ ಕಾಲೇಜಿನಲ್ಲಿ ನಡೆದ ಕೆ ಟಿ ಗಟ್ಟಿಯವರ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಎ. ಕೃಷ್ಣಪ್ಪ ಪೂಜಾರಿಯವರು ಮಾತನಾಡಿ, ಕೆ ಟಿ ಗಟ್ಟಿಯವರು ನಮ್ಮ ತಾಲೂಕಿನವರೆಂದು ಹೇಳಲು ಹೆಮ್ಮೆ ಎನಿಸುತ್ತಿದೆ. ಅವರ ಸಾಹಿತ್ಯಿಕ ಸಾಧನೆ ಅತ್ಯಂತ ಮೌಲಿಕವಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ. ಯದುಪತಿ ಗೌಡರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಬೆಳಾಲು ಪ್ರೌಢಶಾಲೆಯ ಮುಖ್ಯೋಪಾಧ್ಯಾಯರೂ ಆದ ರಾಮಕೃಷ್ಣ ಭಟ್ ರವರು ಸ್ವಾಗತಿಸಿ, ಉಪನ್ಯಾಸಕಿ ಶ್ರೀಮತಿ ಮೀನಾಕ್ಷಿಯವರು ವಂದಿಸಿದರು, ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಗಳಾದ ಬೆಳ್ಳಿಯಪ್ಪರವರು ಕಾರ್ಯಕ್ರಮ ನಿರೂಪಿಸಿದರು.