ಹಿರಿಯ ಪತ್ರಕರ್ತ ಮನೋಹರ ಪ್ರಸಾದ್‌ರವರ ನಿಧನಕ್ಕೆ ಡಾ| ಡಿ. ವೀರೇಂದ್ರ ಹೆಗ್ಗಡೆಯವರಿಂದ ಸಂತಾಪ

Suddi Udaya


ಧರ್ಮಸ್ಥಳ: ಹಿರಿಯ ಪತ್ರಕರ್ತರಾದ ಮನೋಹರ ಪ್ರಸಾದ್‌ರ ನಿಧನದ ಸುದ್ದಿ ತಿಳಿದು ವಿಷಾದವಾಯಿತು.
ಅನುಭವಿ ಪತ್ರಕರ್ತ, ಉತ್ತಮ ವಾಗ್ಮಿ, ಚಿಂತಕ ಹಾಗೂ ಆದರ್ಶ ಕಾರ್ಯಕ್ರಮ ನಿರ್ವಾಹಕ, ಸಹೃದಯಿಯಾದ ಅವರು ನಮ್ಮ ಕ್ಷೇತ್ರದ ಅಪಾರ ಅಭಿಮಾನಿಯೂ, ಭಕ್ತರೂ ಆಗಿದ್ದರು.


ಅವರ ಲೇಖನಗಳು ಅಧಿಕೃತ ಮಾಹಿತಿಯ ಕಣಜವಾಗಿದ್ದು, ಕುತೂಹಲದಿಂದ ಓದಿಸಿಕೊಂಡು ಹೋಗುತ್ತವೆ.
ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ, ಮಸ್ತಕಾಭಿಷೇಕ, ಮಹಾನಡಾವಳಿ, ಉಜಿರೆಯಲ್ಲಿ ನಡೆದ ವಿಶ್ವತುಳುಸಮ್ಮೇಳನ, ಕೃಷಿಮೇಳ, ಮೊದಲಾದ ಸಂದರ್ಭಗಳಲ್ಲಿ ಅವರು ಉದಯವಾಣಿಯಲ್ಲಿ ವಿಶೇಷ ಲೇಖನ, ಪುರವಣಿಗಳನ್ನು ಪ್ರಕಟಿಸಿ ಉತ್ತಮ ಸೇವೆ ನೀಡಿದ್ದಾರೆ.


ಅವರು ಹೇಳಿದ ಒಂದು ಸಂದರ್ಭ ನನಗೆ ಸದಾ ನೆನಪಿನಲ್ಲಿದೆ. ಒಮ್ಮೆ ರಾಮ, ಲಕ್ಷ್ಮಣರು ಕೇರಳಕ್ಕೆ ಹೋದಾಗ, ರಾಮನಿಗೆ ಬಾಯಾರಿಕೆಯಾಯಿತಂತೆ ಆಗ ಲಕ್ಷ್ಮಣನಲ್ಲಿ ನೀರು ತಂದುಕೊಡಲು ಹೇಳಿದ. ಒಮ್ಮೆ ಆಗುವುದಿಲ್ಲ ಎಂದು ಹೇಳಿದ ಲಕ್ಷ್ಮಣ, ಕೊಂಚ ಸಮಯದ ಬಳಿಕ ನೀರು ತಂದುಕೊಟ್ಟ. ಹೀಗೆ ಒಮ್ಮೆಲೆ ಒಪ್ಪಿಕೊಳ್ಳುವ ಬದಲು ಮೊದಲು ಪ್ರತಿಭಟಿಸಿ, ಮತ್ತೆ ಕಾರ್ಯ ಮಾಡುವುದು. ತುಂಬಾ ಪರಿಣಾಮಕಾರಿಯಾಗಿದೆ ಎಂಬುದು ಇದರ ತಾತ್ಪರ್ಯ.


ಅವರ ನಿಧನ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಸಂತಾಪ ಸೂಚಿಸಿದರು.

Leave a Comment

error: Content is protected !!