ಬೆಳ್ತಂಗಡಿ: ಮಹಾಶಿವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಪಾದಯಾತ್ರಿಗಳ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಪೂಜ್ಯ ಹೆಗ್ಗಡೆಯವರ ಆದೇಶದಂತೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಮಾ. 5 ರಿಂದ ಉಚಿತ ವೈದ್ಯಕೀಯ ಸೇವೆಯನ್ನು ಪ್ರಾರಂಭಿಸಲಾಯಿತು.
ಪಾದಯಾತ್ರಿಗಳ ಆರೋಗ್ಯ ಸೇವೆಗಾಗಿ ತೆರೆಯಲ್ಪಟ್ಟ ಮುಂಡಾಜೆ ಹಾಗೂ ಚಾರ್ಮಾಡಿ ಆರೋಗ್ಯ ಶಿಬಿರಗಳಿಗೆ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಕಮಿಟಿ ಸದಸ್ಯರಾದ ರವಿ ಹಾಗೂ ಗಣೇಶ್ ದೀಪ ಬೆಳಗಿಸಿ ಚಾಲನೆ ನೀಡಿದರು. ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್, ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ, ನರ್ಸಿಂಗ್ ಅಧೀಕ್ಷಕಿ ಶೆರ್ಲಿ, ಶಿಬಿರದ ಮೇಲ್ವಿಚಾರಕ ರವೀಂದ್ರ ಗುಡಿಗಾರ್ ಉಪಸ್ಥಿತರಿದ್ದರು. ಜಗನ್ನಾಥ. ಎಂ ಕಾರ್ಯಕ್ರಮ ನಡೆಸಿಕೊಟ್ಟರು.
ಹೆಗ್ಗಡೆಯವರ ಆಶಯದಂತೆ ಪಾದಯಾತ್ರಿಗಳಲ್ಲಿ ಶಿವನನ್ನು ಕಾಣುವ ಶುದ್ಧ ಮನಸ್ಸಿನಿಂದ ಹೇಮಾವತಿ ವಿ ಹೆಗ್ಗಡೆಯವರ ಹಾಗೂ ಡಿ. ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದೊಂದಿಗೆ ಚಾರ್ಮಾಡಿ, ಮುಂಡಾಜೆ, ಧರ್ಮಸ್ಥಳ, ಬೂಡುಜಾಲು, ಎಸ್.ಡಿ.ಎಂ ಡಿಎಡ್ ಕಾಲೇಜು ಇಲ್ಲಿ ಪಾದಯಾತ್ರಿಗಳಿಗೆ ಉಚಿತ ಆರೋಗ್ಯ ಶಿಬಿರ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯಲ್ಲಿ ಪಾದಯಾತ್ರಿಗಳಿಗೆ ತುರ್ತು ಆರೋಗ್ಯ ಸೇವೆ ನೀಡಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯವಿರುವ ಔಷಧಿ, ಮುಲಾಮು, ಸ್ಪ್ರೇ ಬ್ಯಾಂಡೇಜ್, ಗ್ಲುಕೋಸ್ ಇತ್ಯಾದಿಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ ಎಂದು ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.