ಬಿಜೆಪಿ ಮಹಿಳಾ ಮೋರ್ಚಾದಿಂದ ಉಜಿರೆಯಲ್ಲಿ ದ್ವಿಚಕ್ರ ವಾಹನ ರ್‍ಯಾಲಿ :

Suddi Udaya

ಉಜಿರೆ: ರಥಕ್ಕೆ ಎರಡು ಚಕ್ರಗಳಿದ್ದಂತೆ ಹೆಗಲಿಗೆ ಹೆಗಲು ಕೊಟ್ಟು ಸಾಗುವ ಮಹಿಳೆಯರು ಸೈನ್ಯದಿಂದ ಹಿಡಿದು ಎಲ್ಲಾ ಕ್ಷೇತ್ರಗಳಲ್ಲಿ ಸಮಾನವಾಗಿ ದುಡಿಯುತ್ತಿದ್ದು ದೇಶದ ಅಭಿವೃದ್ಧಿಯಲ್ಲಿ ಸರಿಸಮಾನ ಕೊಡುಗೆ ನೀಡುತ್ತಿದ್ದಾರೆ. ಈ ಬಾರಿ ವಿಶ್ವ ಮಹಿಳಾ ದಿನಾಚರಣೆಗೆ ವಿಶೇಷ ಕೊಡುಗೆಯಾಗಿ ಕೇಂದ್ರ ಸರಕಾರ 27 ವರ್ಷಗಳ ಬೇಡಿಕೆಯಾಗಿದ್ದ 33  ಶೇ ಮಹಿಳಾ ಮೀಸಲಾತಿಯ  ಮಹಿಳಾ ಸಶಕ್ತೀಕರಣದ ಐತಿಹಾಸಿಕ ಮಸೂದೆಯನ್ನು ಲೋಕಸಭೆ ಅಂಗೀಕರಿಸಿದೆ  ಎಂದು ವಿಧಾನ ಪರಿಷತ್ ಶಾಸಕ ಪ್ರತಾಪಸಿಂಹ ನಾಯಕ್ ಹೇಳಿದರು.

 ಅವರು  ಮಾ 5 ರಂದು  ಉಜಿರೆಯ ಶ್ರೀ ಶಾರದಾ ಮಂಟಪ  ಮುಂಭಾಗದಲ್ಲಿ ಬೆಳ್ತಂಗಡಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ನಡೆದ  ದ್ವಿಚಕ್ರ ವಾಹನ ರ್‍ಯಾಲಿಗೆ ಚಾಲನೆ ನೀಡಿ ಮಾತನಾಡಿದರು. ಕೇಂದ್ರದ ಮೋದಿ ಸರಕಾರ ನೂರಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಮಹಿಳೆಯರ ಆತ್ಮಶಕ್ತಿ ಜಾಗೃತಗೊಳಿಸಿ ಸರಿ ಸಮಾನ ಸ್ಥಾನಮಾನ ನೀಡಿದೆ. ಜನಧನ, ಬೇಟಿ  ಬಚಾವೊ , ಬೇಟಿ ಪಡಾವೋ ಮೊದಲಾದ ಯೋಜನೆಗಳ  ಮೂಲಕ ಮಹಿಳಾ ಮೀಸಲಾತಿ ಮಸೂದೆ  ಲೋಕಸಭೆ, ರಾಜ್ಯಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುವುದು  ಮಹಿಳೆಯರಿಗೆ ಅವಕಾಶಗಳನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

ಬೆಳ್ತಂಗಡಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಮಾತನಾಡಿ ಕೇಂದ್ರ ಸರಕಾರವು ಮಹಿಳೆಯರಿಗೆ ಮೀಸಲಾತಿ ಹಕ್ಕನ್ನು ಜಾರಿಗೊಳಿಸಿರುವುದು ಶ್ಲಾಘನೀಯ. ಅನೇಕ ವರ್ಷಗಳಿಂದ ಇದರ ಜಾರಿಗೆ ಕಾಯುತ್ತಿದ್ದ ಮಹಿಳೆಯರಲ್ಲಿ ಇಂದು ಸಂತಸ ಮೂಡಿದ್ದು ,ಅದಕ್ಕಾಗಿ  ನಾರಿ ಶಕ್ತಿಯ ಜಾಗೃತಿಗಾಗಿ ವಿಶೇಷ ವಾಹನ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸರಾವ್, ಉಜಿರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ ಕಾರಂತ್, ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪ್ರಮುಖರಾದ ಕೊರಗಪ್ಪ ಗೌಡ, ಜಯಂತಗೌಡ ಗುರಿಪಳ್ಳ, ಅರವಿಂದ ಲಾಯಿಲ, ಜಯಾನಂದ ಗೌಡ ಪ್ರಜ್ವಲ್, ಸೀತಾರಾಮ ಬೆಳಾಲು, ಯಶವಂತ ಪುದುವೆಟ್ಟು, ಬೆಳ್ತಂಗಡಿ ರೋಟರಿ ಕ್ಲಬ್ ಕಾರ್ಯದರ್ಶಿ  ವಿದ್ಯಾಕುಮಾರ್ ಕಾಂಚೋಡು, ನಿರಂಜನ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಮಹಿಳಾ ಮೋರ್ಚಾದ ತಾಲೂಕು ಕಾರ್ಯದರ್ಶಿ ಪೂರ್ಣಿಮಾ ಮುಂಡಾಜೆ ಸ್ವಾಗತಿಸಿದರು. ಉಜಿರೆಯ  ಶ್ರೀ ಜನಾರ್ದನ ದೇವಸ್ಥಾನದಿಂದ ಬೆಳಾಲು ಕ್ರಾಸ್ ತನಕ ನೂರಾರು ಮಹಿಳೆಯರಿಂದ  ಭಾರತ್  ಮಾತಾ ಕಿ ಜೈ  ಘೋಷಣೆಯೊಂದಿಗೆ ದ್ವಿ ಚಕ್ರ ವಾಹನ ಜಾಥಾ ನಡೆಯಿತು.

Leave a Comment

error: Content is protected !!