ತುಮಕೂರಿನಲ್ಲಿ ಮೂವರಿದ್ದ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣ: ರೂ. 50 ಲಕ್ಷ ನಗದಿನೊಂದಿಗೆ ಕಾರಿನಲ್ಲಿ ಹೋಗಿದ್ದ ಮೂವರು: ನಕಲಿ ಚಿನ್ನದ ಆಸೆಗೆ ಮೂವರ ಬಲಿಯಾಯಿತೆ ಎಂಬ ಶಂಕೆ: ಸಮಗ್ರ ತನಿಖೆ ಬಳಿಕವಷ್ಟೇ ದೊರೆಯಲಿದೆ ಸ್ವಷ್ಟ ಮಾಹಿತಿ

Suddi Udaya

ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಕಾರಿನೊಳಗಿದ್ದ ಮೂವರು ಸಾವನ್ನಪ್ಪಿದ ಸಂಬಂಧಿಸಿದಂತೆ ಮೂವರು ಸೇರಿ 50 ಲಕ್ಷ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಕುಟುಂಬ ಸದಸ್ಯರು ಕೋರಾ ಪೊಲೀಸರ ವಿಚಾರಣೆ ವೇಳೆ ಮಾಹಿತಿ ನೀಡಿದ್ದಾರೆ.

ಹಣ ತೆಗೆದುಕೊಂಡು ಹೋದ ವಿಚಾರ: ಇನ್ನೂ ಕಾರಿನಲ್ಲಿ ಹೋಗುವಾಗ ಮದಡ್ಕದ ಇಸಾಕ್ ಉಜಿರೆಯಲ್ಲಿದ್ದ ಸ್ವಂತ ಮನೆಯನ್ನು ಮಾರಾಟ ಮಾಡಿದ ಹಣ ಮತ್ತು ಮಗಳ ಚಿನ್ನವನ್ನು ಅಡವಿಟ್ಟು ಸುಮಾರು 35 ಲಕ್ಷ ಹಣವನ್ನು ತೆಗೆದುಕೊಂಡು ಹೋಗಿದ್ದರು ಎಂದು ಇಸಾಕ್ ಪತ್ನಿ ಕೋರಾ ಪೊಲೀಸ್ ಠಾಣೆಯಲ್ಲಿ ಮಾ.23 ರಂದು ಪೊಲೀಸ್ ವಿಚಾರಣೆ ವೇಳೆ ಹೇಳಿಕೆಯನ್ನು ನೀಡಿದ್ದಾರೆ. ಇನ್ನೂ ಶಿರ್ಲಾಲು ಸಿದ್ದಿಕ್ ಮತ್ತು ಟಿ.ಬಿ.ಕ್ರಾಸ್ ಸಾಹುಲ್ ಹಮೀದ್ ಕೂಡ ಸ್ನೇಹಿತರ ಮೂಲಕ ಪಡೆದ ಸುಮಾರು 15 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ತೆಗೆದುಕೊಂಡು ಹೋಗಿದ್ದರು ಎಂದು ಮನೆಯವರು ಹೇಳಿಕೆ ನೀಡಿದ್ದಾರೆ. ಒಟ್ಟು ಮೂವರ ಬಳಿ 50 ಲಕ್ಷಕ್ಕೂ ಮಿಕ್ಕಿ ಹಣ ತುಮಕೂರು ಹೋಗುವಾಗ ಇತ್ತು ಎನ್ನಲಾಗಿದೆ.

ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಹೇಳಲಾಗಿದೆ.

ಮೂವರು ಕೂಡ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ಮಾ.21 ರಂದು ರಾತ್ರಿ ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿ ನಂತರ ಹಣವನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನೂ ಪ್ರಕರಣ ಸಂಬಂಧ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಸೇರಿ ಆರು ಜನರನ್ನು ಮೊಬೈಲ್ ಕಾಲ್ ಡಿಟೈಲ್ಸ್ ಮೂಲಕ ಕಾರ್ಯಾಚರಣೆ ನಡೆಸಿ ಮಾ.22 ರಂದು ರಾತ್ರಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬೆಂಕಿಗಾಹುತಿಯಾದ ಕಾರನ್ನು ಕೋರಾ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿದ್ದು. ಮೂವರ ಶವ ಸರಕಾರಿ ಆಸ್ಪತ್ರೆಯಲ್ಲಿ ಡಿಎನ್ಎ ಪರೀಕ್ಷೆ ಮಾಡಿದ ಬಳಿಕ ಮುಂದಿನ ಗುರುವಾರ ಅಥವಾ ಶುಕ್ರವಾರ ಮೃತದೇಹವನ್ನು ಗುರುತು ಪತ್ತೆಯಾದ ಬಳಿಕ ಅವರ ಕುಟುಂಬ ಸದಸ್ಯರಿಗೆ ನೀಡಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Leave a Comment

error: Content is protected !!