ಬೆಳ್ತಂಗಡಿ:ವಿಷು ಕಣಿ ಆಚರಣಾ ಸಮಿತಿಯಿಂದ 3 ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷು ಕಣಿ ಆಚರಣೆಯು ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಎ.13 ರಂದು ನಡೆಯಲಿದೆ.ಕಳೆದ ಎರಡು ವರ್ಷದ ಹಿಂದೆ ಉಜಿರೆಯಲ್ಲಿ ನಡೆದ ವಿಷು ಕಣಿ ಆಚರಣೆಯಲ್ಲಿ ಬೆಳ್ತಂಗಡಿ ತಾಲೂಕಿನ ಸಾವಿರಾರು ಜನರು ಭಾಗವಹಿಸಿದ್ದರು.ವಿಷು ಹಬ್ಬ ಕೃಷಿ ಪ್ರಧಾನ ಹಬ್ಬವಾಗಿದ್ದು ಮನೆಮಂದಿ ವಿಷು ಕಣಿ ಇಟ್ಟು ಬೆಳಗ್ಗೆ ಬೇಗ ಎದ್ದು ಹೆಚ್ಚಿನ ಮನೆ, ದೇವಸ್ಥಾನ, ದೈವಸ್ಥಾನಗಳಲ್ಲಿ ಪೂಜೆ ನಡೆಸುತ್ತಾರೆ.ಬಾಳೆಹಣ್ಣು, ಎಳನೀರು, ಹಲಸಿನ ಹಣ್ಣು, ಕನ್ನಡಿ, ತಂಬಿಗೆಯಲ್ಲಿ ನೀರು, ಎಲೆಅಡಿಕೆ, ಹಣ, ಕುಂಕುಮ,ಚಿನ್ನದ ಒಡವೆ ಮೊದಲಾದ ಸುವಸ್ತುಗಳನ್ನು ಜೋಡಿಸಿ ವಿಷು ಕಣಿ ಮಾಡಲಾಗುತ್ತದೆ.ಈ ಸಂದರ್ಭ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ-ಪುನಸ್ಕಾರ ನಡೆಯುತ್ತದೆ. ಸಾವಿರಾರು ಭಕ್ತರು ಪಾಲ್ಗೊಂಡು ಶ್ರೀ ದೇವರ ದರುಶನ ಪಡೆದು ಅನ್ನಪ್ರಸಾದ ಸ್ವೀಕರಿಸುತ್ತಾರೆ.ಬಹುತೇಕ ಮನೆಗಳಲ್ಲಿ ವಿಷುಕಣಿ ಇಟ್ಟು ಕುಟುಂಬದ ಸದಸ್ಯರೆಲ್ಲರೂ ಜತೆ ಸೇರಿ ಹಬ್ಬ ಆಚರಿಸಿ ಸಿಹಿಯೂಟ ಮಾಡುತ್ತಾರೆ. ಈ ಬಾರಿ ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ವಿನೂತನವಾಗಿ ಹಬ್ಬವನ್ನು ಆಚರಿಸಲು ನಿರ್ದರಿಸಿದೆ. ವಿಶೇಷ ಕೇರಳ ಚೆಂಡೆ ಪ್ರದರ್ಶನ,ಪೂಕಳಂ,ಕೇರಳದ ನುರಿತ ಕಲಾವಿದರಿಂದ ವಿವಿಧ ಮನೋರಂಜನಾ ಕಾರ್ಯಕ್ರಮ, ಕೇರಳ ಸಾಂಪ್ರಾದಾಯಿಕ ಶೈಲಿಯ 32 ಬಗೆಯ ಉಟೋಪಚಾರ ಇದೆಯೆಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.