ವೇಣೂರು: ಶ್ರದ್ಧೆ ಗಟ್ಟಿಯಾಗಿರಬೇಕಾದರೆ ಶ್ರದ್ಧಾಕೇಂದ್ರಗಳು ಗಟ್ಟಿಯಾಗಿರಬೇಕು ಎಂಬುದು ನಮ್ಮ ನಂಬಿಕೆ. ಭಜನ ಮಂದಿರಗಳು ನಮ್ಮ ಭಕ್ತಿಯನ್ನು ಒಗ್ಗೂಡಿಸುವ ಕೇಂದ್ರಗಳಾಗಿದ್ದು, ಇಲ್ಲಿ ನಿರಂತರ ಪೂಜಾ ಕೈಂಕರ್ಯಗಳನ್ನು ನಡೆಸಿಕೊಂಡು ಬಂದಾಗ ಇಂತಹ ಅಪೂರ್ವ ಗುಡಿಯ ನಿರ್ಮಾಣಕ್ಕೆ ಸಾರ್ಥಕತೆ ಬರುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ನುಡಿದರು.
ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಗುಡಿಯಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠಾ ಮಹೋತ್ಸವದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ಕಳೆದ 50 ವರ್ಷಗಳಿಂದ ನಿರಂತರ ಭಜನ ಕಾರ್ಯಕ್ರಮ ನಡೆಸಿಕೊಂಡು ಬಂದು ಇದೀಗ ಅಂದದ ಗರ್ಭಗೃಹ ನಿರ್ಮಾಣ ಮಾಡುವ ಸುಯೋಗ ನಿಮಗೆ ಕೂಡಿ ಬಂದಿದೆ. ದೇವರ ನಾಮಸ್ಮರಣೆ ಇಲ್ಲಿ ನಿರಂತರವಾಗಿ ನಡೆಯುವಂತಾಗಲಿ ಎಂದು ಸ್ವಾಮೀಜಿ ಹೇಳಿದರು.
ಕಟೀಲು ಕ್ಷೇತ್ರದ ಅನಂತ ಪದ್ಮನಾಭ ಅಸ್ರಣ್ಣರು ದೀಪ ಪ್ರಜ್ವಲನೆ ನೆರವೇರಿಸಿದರು. ಶ್ರೀ ಕ್ಷೇತ್ರ ಮುದ್ದಾಡಿಯ ಆಡಳಿತ ಮೊಕ್ತೇಸರರಾದ ಯಂ. ವಿಜಯರಾಜ ಅಧಿಕಾರಿ ಮಾರಗುತ್ತು ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ವೇಣೂರಿನ ಪ್ರಸಿದ್ಧ ವೈದ್ಯ ಡಾ| ಶಾಂತಿಪ್ರಸಾದ್, ಉದ್ಯಮಿ ಕೆ. ಭಾಸ್ಕರ ಪೈ, ಜಿ.ಪಂ. ಮಾಜಿ ಸದಸ್ಯ ಪಿ. ಧರಣೇಂದ್ರ ಕುಮಾರ್, ಪೆರಾಡಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ಕೆ. ವಿಜಯ ಗೌಡ ಆಗಮಿಸಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ಪ್ರಾದೇಶಿಕ ನಿರ್ದೇಶಕ ದುಗ್ಗೆ ಗೌಡ, ಎಂಸಿಎಫ್ ನಿವೃತ್ತ ಅಧಿಕಾರಿ ಜಯರಾಮ್ ಕಾರಂದೂರು, ಲಕ್ಷ್ಮೀನಾರಾಯಣ ಭಟ್, ವೇಣೂರು ದೇವಸ್ಥಾನದ ಮಾಜಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ್ ಶೆಟ್ಟಿ ಖಂಡಿಗ, ಪಿ.ಯನ್. ಪುರುಷೋತ್ತಮ ರಾವ್, ಲಕ್ಷ್ಮೀ ಪದ್ಮಪೂಜಾರಿ ಪೊಕ್ಕಿ, ಉದ್ಯಮಿ ಪ್ರಕಾಶ್ ನಾರಾವಿ, ಮಂಡಳಿಯ ಗೌರವ ಸಲಹೆಗಾರರಾದ ಪೊಕ್ಕಿ ಲಕ್ಷ್ಮೀನಾರಾಯಣ ಆಚಾರ್ಯ, ರಾಜೇಂದ್ರ ಆಚಾರ್ಯ ಮುದ್ದಾಡಿ, ಭಜನ ಮಂಡಳಿ ಗೌರವಾಧ್ಯಕ್ಷ ಶಾಂತಿರಾಜ ಜೈನ್, ಕಾರ್ಯದರ್ಶಿ ಸತೀಶ್ ಕುಲಾಲ್, ಕೋಶಾಧಿಕಾರಿ ರಾಜು ಪೂಜಾರಿ, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ ಕುಂಞಡಿ, ಸೇವಾಪ್ರತಿನಿಧಿ ಹರೀಶ್ ಬಾಡಾರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸನ್ಮಾನ
ಯಕ್ಷಗಾನ ಕಲಾವಿದರಾದ ಹರೀಶ್ ಕುಲಾಲ್, ನಾರಾಯಣ ಕುಲಾಲ್, ಪೊಕ್ಕಿ ಲಕ್ಷ್ಮೀನಾರಾಯಣ ಆಚಾರ್ಯ, ಶಾಂತಿರಾಜ ಜೈನ್ ಕೊಡಂಗೆ, ಬಾಬು ಮಡಿವಾಳ ನೆಲ್ಯರಡ್ಡ, ಮಂಜಪ್ಪ ದೇವಾಡಿಗ ಗೋಳಿದಡ್ಕ ಅವರನ್ನು ಸನ್ಮಾನಿಸಲಾಯಿತು. ದಾನಿಗಳನ್ನು ಹಾಗೂ ಸಹಕಾರ ನೀಡಿದವರನ್ನು ಗೌರವಿಸಲಾಯಿತು.
ಶಿಲಾಮಯ ಗುಡಿಯಲ್ಲಿ ಪ್ರತಿಷ್ಠೆ
ನೂತನವಾಗಿ ಪುನರ್ ನಿರ್ಮಿಸಿದ ಶಿಲಾಮಯ ಗುಡಿಯಲ್ಲಿ ಎ. 10 ರಂದು ಶ್ರೀ ಸತ್ಯನಾರಾಯಣ ದೇವರನ್ನು ವೇ|ಮೂ| ರಾಮದಾಸ ಅಸ್ರಣ್ಣರ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾಪಿಸಲಾಯಿತು. ಬಳಿಕ 50 ನೇ ವರ್ಷದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ರಾತ್ರಿ ಕಟೀಲು ಮೇಳದವರಿಂದ ಮಾನಿಷಾದ ಎಂಬ ಪೌರಾಣಿಕ ಯಕ್ಷಗಾನ ಜರಗಿತು. ಎ. 9 ಮಂದಿರದಲ್ಲಿ ಶಿಲ್ಪಿಗಳಿಂದ ಆಲಯ ಪರಿಗ್ರಹ, ವಾಸ್ತುಪೂಜೆ, ರಾಕ್ಷೆಘ್ನ ಹೋಮ, ಸುದರ್ಶನ ಹೋಮ ನಡೆಯಿತು. ರಾತ್ರಿ ವಿದುಷಿ ಕು| ಶ್ರವಣ ಕುಮಾರಿ ಹಲ್ಲಂದೋಡಿ ಅವರಿಂದ ಭರತನಾಟ್ಯ ಹಾಗೂ ಕು| ಸ್ಪೂರ್ತಿ ಭಟ್ ತುಂಬೆ ಅವರ ತಂಡದವರಿಂದ ನೃತ್ಯ ಗಾನ ವೈಭವ ಜರಗಿತು.
ಭಜನ ಮಂಡಳಿ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು ಸ್ವಾಗತಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಯ ವಲಯ ಮೇಲ್ವಿಚಾರಕಿ ವೀಣಾ ವಂದಿಸಿದರು. ಗುಣಪ್ರಸಾದ್ ಕಾರಂದೂರು ಪ್ರಾಸ್ತಾವಿಸಿದರು.