ಭವ್ಯ ಭಾರತವನ್ನು ಕಾಣುವ ನಮ್ಮ ಕನಸು ನನಸಾಗಿದೆ: ಕೆ ಪ್ರತಾಪಸಿಂಹ ನಾಯಕ್

Suddi Udaya

ಬೆಳ್ತಂಗಡಿ: ಬದಲಾದ ಭವ್ಯ ಭಾರತವನ್ನು ಕಾಣುವ ನಮ್ಮ ಕನಸು ನನಸಾಗಿದೆ. ಕಾಶ್ಮೀರದಲ್ಲಿನ 370 ನೇ ವಿಧಿ ರದ್ದಾಗಬೇಕು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು, ಏಕರೂಪದ ನಾಗರಿಕ ಸಂಹಿತೆ ಜಾರಿಗೆ ಬರಬೇಕು, ದೇಶದ ಗಡಿಗಳು ಭದ್ರವಾಗಿರಬೇಕು, ಭ್ರಷ್ಟಾಚಾರ ರಹಿತ ಆಡಳಿತ ದೇಶದಲ್ಲಿರಬೇಕು, ಆರ್ಥಿಕವಾಗಿ ಸ್ವಾವಲಂಬಿ ದೇಶವಾಗಬೇಕು, ಮೂಲಭೂತ ಸೌಕರ್ಯಗಳು ಜನತೆಗೆ ವ್ಯವಸ್ಥಿತವಾಗಿ ತಲುಪಬೇಕು, ಪಂಡಿತ ದೀನದಯಾಳ ಉಪಾಧ್ಯಾಯ, ಶ್ಯಾಮಾಪ್ರಸಾದ್ ಮುಖರ್ಜಿ ಅವರ ಧ್ಯೇಯಗಳು ಸಾಕಾರಗೊಳ್ಳಬೇಕು ಇದಕ್ಕಾಗಿ ಕೇಂದ್ರದಲ್ಲಿ ಬಿಜೆಪಿ ಪೂರ್ಣ ಬಹುಮತದ ಸರಕಾರ ಬರಬೇಕು ಎಂಬ ಕನಸನ್ನು ನಾವೆಲ್ಲ ಕಾಣುವ ದಿನಗಳಿದ್ದವು. ನಮ್ಮ ಕನಸು ನನಸಾಗಲಿದೆಯೇ ಎಂಬ ಸಂಶಯವೂ ಒಂದೆಡೆ ಕಾಡುತ್ತಿತ್ತು. ಆದರೆ ಇದೀಗ ದೇಶದ ಆಡಳಿತ ಹೇಗಿರಬೇಕು ಎಂಬುದನ್ನು ವಿಶ್ವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ-ಎನ್ ಡಿ ಎ ಸರಕಾರ ತೋರಿಸಿಕೊಟ್ಟಿದೆ. ಭಾರತದ ರೆಕ್ಕೆಗಳಿಗೆ ಬಲ ಬಂದಿದೆ. ದಶದಿಕ್ಕುಗಳಲ್ಲೂ, ಸರ್ವ ಕ್ಷೇತ್ರಗಳಲ್ಲೂ, ವಿಶ್ವವ್ಯಾಪಿಯಾಗಿ ಭಾರತ ಬೆಳೆಯುತ್ತಿದೆ.

ಭಾರತ ತನ್ನ ಉನ್ನತಿಗೆ, ಶ್ರೇಯಸ್ಸಿಗೆ ಬೇಕಾಗುವ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಜನತೆ ನೀಡಿದ ಆಶೀರ್ವಾದದಿಂದ ಬಂದ ಸ್ಥಿರ ಸರಕಾರದ ಕಾರಣಕ್ಕೆ ಸಾಧ್ಯವಾಗಿದೆ. ಕಾಶ್ಮೀರವು ಪ್ರಾಕೃತಿಕವಾಗಿ ಶ್ರೀಮಂತವಾಗಿತ್ತು. ಆದರೆ ಹಿಂದಿನ ಸರಕಾರಗಳ ಆಡಳಿತ ವೈಫಲ್ಯದಿಂದಾಗ ಅದು ಭಯೋತ್ಪಾದಕರ ನೆಲೆವೀಡಾಯಿತು. 370ನೇ ವಿಧಿಯನ್ನು ಮತ್ತು 35 ಎ ಯನ್ನು ರದ್ದು ಮಾಡಿದ ನಂತರ ಕಾಶ್ಮೀರ ಸ್ವಚ್ಛಂದವಾಗಿ ಉಸಿರಾಡುವಂತಾಗಿದೆ. ಈ ಕಾಯ್ದೆ ಹಿಂಪಡೆದ ನಂತರ ರೂ. 80,000 ಕೋಟಿ ಮೊತ್ತದ 15 ಸಚಿವಾಲಯಗಳಿಗೆ ಸಂಬಂಧಿಸಿದ 63 ಪ್ರಮುಖ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕಿ 2024ರ ಫೆಬ್ರುವರಿಯ ಹೊತ್ತಿಗೆ ದಾಖಲೆಯ 2 ಕೋಟಿಯಷ್ಟು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದಾರೆ. ಏರ್ ಸ್ಟ್ರೈಕ್ ಮತ್ತು ಸರ್ಜಿಕಲ್ ಸ್ಟ್ರೈಕ್ ನಿಂದ ಪಾಕಿಸ್ತಾನ ಪತರಗುಟ್ಟಿದೆ. ನರೇಂದ್ರ ಮೋದಿಯಂತಹ ದೂರದೃಷ್ಟಿಯುಳ್ಳ ಪ್ರಧಾನಿಯಿಂದ ಮಾತ್ರ ಇದು ಸಾಧ್ಯವಾಗಿದೆ.

ರಾಮನ ಅಸ್ತಿತ್ವದ ಕುರಿತು ನಂಬಿಕೆಯಿಲ್ಲದವರ ಬಾಯಲ್ಲೂ ರಾಮನ ಜಪ ಮಾಡುವಂತೆ ಮಾಡಿರುವುದು ನರೇಂದ್ರ ಮೋದಿಯವರು. ಟೆಂಟ್ ನಲ್ಲಿದ್ದ ರಾಮಲಲ್ಲಾ ಭವ್ಯ ದಿವ್ಯ ಮಂದಿರದಲ್ಲಿ ವಿರಾಜಮಾನನಾದ. ಪ್ರಧಾನಿಯವರು ದೇಗುಲವನ್ನು ರಾಷ್ಟ್ರಕ್ಕೆ ಸಮರ್ಪಿಸಿ ದೇಶದ ಜನರ ಪ್ರೀತಿಗೆ ಪಾತ್ರರಾದರು. ಉಜ್ಜಯನಿಯ ಮಹಾಕಾಲ, ಕೇದಾರನಾಥ್ ನಲ್ಲಿನ ಶಿವ, ಶಂಕರಾಚಾರ್ಯರ ಸಮಾಧಿ, ಗುಜರಾತಿನ ಕಾಳಿಕಾ ಮಂದಿರ, ಉತ್ತರ ಪ್ರದೇಶದ ವಿಂಧ್ಯಾಚಲ ಕಾರಿಡಾರ್, ಇಂಫಾಲಿನ ಗೋವಿಂದ ಜೀ ಮಂದಿರ, ಈಗಾಗಲೇ ನಿರ್ಮಿಸಿದ ಸೋಮನಾಥ ಮಂದಿರದ ಅಭಿವೃದ್ಧಿ, ಕಾಶಿ ವಿಶ್ವನಾಥ ಕ್ಷೇತ್ರದ ಜೀರ್ಣೋದ್ದಾರ, ಡಾ| ಬಾಬಾ ಸಾಹೇಬ ಅಂಬೇಡ್ಕರ್ ಸ್ಮರಣಾರ್ಥ ಪಂಚತೀರ್ಥಗಳ ಅಭಿವೃದ್ದಿ ಮಾಡಿದ್ದಾರೆ, ಬ್ರಿಟೀಷರು ಲೂಟಿ ಹೊಡೆದ 238 ದೇವತಾ ಮೂರ್ತಿಗಳನ್ನು ಭಾರತಕ್ಕೆ ತರಿಸಿಕೊಂಡಿದ್ದಾರೆ. ಭಾರತದಲ್ಲಿ ಮಾತ್ರವಲ್ಲ ಅಬುಧಾಬಿಯಲ್ಲೂ ಹಿಂದೂ ಮಂದಿರದ ಉದ್ಘಾಟನೆಯ ಮೂಲಕ ಅಭಿವೃದ್ಧಿಯ ಓಟದಲ್ಲಿ ನಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಳೆದುಕೊಳ್ಳಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ದೇಶದಲ್ಲೇ ಪರಿಣಾಮಕಾರಿಯಾದ ಲಸಿಕೆ ತಯಾರಿಸಿ ಪ್ರತಿಯೊಬ್ಬ ನಾಗರೀಕನಿಗೂ ಉಚಿತ ಲಸಿಕೆ ನೀಡುವ ಮೂಲಕ ಕೋವಿಡ್ ಸಂಕಷ್ಟದ ಯಶಸ್ವೀ ನಿರ್ವಹಣೆಯನ್ನು ಮಾಡಿರುವುದು ಇಡೀ ವಿಶ್ವವೇ ಗಮನಿಸಿದೆ. ಕೈಗೆಟಕುವ ದರದಲ್ಲಿ ಔಷಧಗಳ ಮಾರಾಟವನ್ನು ದೇಶದ 8,727 ಜನೌಷಧ ಕೇಂದ್ರಗಳಲ್ಲಿ ಆರಂಭಿಸಿರುವುದು ಔಷಧ ಕ್ಷೇತ್ರದಲ್ಲಿ ಕ್ರಾಂತಿಯೇ ಆಗಿದೆ. ಕರ್ನಾಟಕದಲ್ಲಿ 1,052 ಕೇಂದ್ರಗಳಿವೆ. ತ್ರೇತಾಯುಗದಿಂದ ಇಲ್ಲಿಯ ತನಕ ಭಾರತ ಕೊಟ್ಟದ್ದು ಸಂಜಿವೀನಿಯನ್ನೇ ಹೊರತು ಹಾಲಾಹಲವನ್ನಲ್ಲ ಎಂಬುದನ್ನು ಮೋದಿ ಸಾಬೀತುಪಡಿಸಿದ್ದಾರೆ.

ಡಿಜಿಟಲ್ ಬ್ಯಾಂಕಿಂಗ್ ಮೂಲಕ ಸರಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 11.3 ಕೋಟಿ ರೈತರಿಗೆ 1.82 ಲಕ್ಷ ಕೋ. ರೂ. ಆರ್ಥಿಕ ನೆರವು, ಉಜ್ವಲ ಯೋಜನೆಯ ಅಡಿಯಲ್ಲಿ ರೂ. 9 ಕೋಟಿ ಎಲ್.ಜಿ.ಪಿ. ಸಂಪರ್ಕ, ಪ್ರಾದೇಶಿಕ ಮತ್ತು ರಾಷ್ಟ್ರ ಹಿತ ದೃಷ್ಟಿಯಿಂದ ಮಕ್ಕಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ, ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನದಂಗವಾಗಿ ಪ್ರತಿ ತಿಂಗಳು 9 ರಂದು ಎಲ್ಲಾ ಗರ್ಭಿಣಿಯರಿಗೆ ಸಾರ್ವತ್ರಿಕವಾಗಿ ಸಮಗ್ರ ಮತ್ತು ಗುಣಮಟ್ಟದ ಪ್ರಸವ ಪೂರ್ವ ಆರೈಕೆಯಡಡಿ ಆಗಸ್ಟ್ 2023ರವರೆಗೆ 17,41,249 ಗರ್ಭಿಣಿಯರಿಗೆ ಆರೈಕೆ ಮಾಡಲಾಗಿದೆ. ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ಮೀಸಲಾತಿ ನೀಡುವ ನಾರಿ ಶಕ್ತಿ ವಂದನಾ ಅಧಿನಿಯಮ ರೂಪಿಸಲಾಗಿದೆ. ಕರ್ನಾಟಕದಲ್ಲಿ 22.06 ಲಕ್ಷ ಮಂದಿ ಅಟಲ್ ಪಿಂಚಣಿಯಡಿಯಲ್ಲಿದ್ದಾರೆ.

ಭಾರತ ಬದಲಾಗುತ್ತಿದೆ. ಸ್ವಾವಲಂಬಿ, ಸುದೃಢ ದೇಶವಾಗುತ್ತಿದೆ. ಈ ಬದಲಾವಣೆಯ ಚಿತ್ರಣ ಮುಂದುವರಿಯಬೇಕಾದರೆ ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಹೀಗಾಗಿ ಈ ಬಾರಿ ಎನ್.ಡಿ.ಎ. ಕೇಂದ್ರದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು ಅನಿವಾರ್ಯ ವಿಧಾನಪರಿಷತ್ ಶಾಸಕ ಕೆ ಪ್ರತಾಪಸಿಂಹ ನಾಯಕ್ ಹೇಳಿದರು.

Leave a Comment

error: Content is protected !!