ಏರುತ್ತಿರುವ ತಾಪಮಾನ: ಅಂಗನವಾಡಿ ಕೇಂದ್ರಗಳ ಸಮಯ ಪರಿಷ್ಕರಣೆ- ಬೆಳಗ್ಗೆ 8ರಿಂದ ಮಧ್ಯಾಹ್ನ 12 ರವರೆಗೆ ಕಾರ್ಯ ನಿರ್ವಹಣೆಗೆ ಆದೇಶ

Suddi Udaya

Updated on:

ಬೆಳ್ತಂಗಡಿ: ಬೇಸಿಗೆಯಲ್ಲಿ ಏರುತ್ತಿರುವ ತಾಪಮಾನ ಆಧರಿಸಿ ಹಾಗೂ ಲೋಕಸಭಾ ಚುನಾವಣೆಯಿಂದಾಗಿ ಹಲವು ಅಂಗನವಾಡಿ ಕಾರ್ಯಕರ್ತೆಯರು ಹಾಗು ಇನ್ನಿತರೆ ಚುನಾವಣಾ ಕೆಲಸಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ 2024-25ನೇ ಸಾಲಿಗೆ ಅಂಗನವಾಡಿ ಕೇಂದ್ರಗಳಿಗೆ ೧೫ ದಿನಗಳ ಬೇಸಿಗೆ ರಜೆ ಹಾಗೂ ಅಂಗನವಾಡಿ ಕೇಂದ್ರಗಳ ಕಾರ್ಯನಿರ್ವಹಣೆಯ ಸಮಯವನ್ನು ಪರಿಷ್ಕರಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಆದೇಶ ನೀಡಿದೆ.

ಸಮಯ ಬದಲಾವಣೆ :

ಏರುತ್ತಿರುವ ತಾಪಮಾನದ ಹಿನ್ನಲೆಯಲ್ಲಿ ಅಂಗನವಾಡಿಗಳ ಸಮಯವನ್ನು ಪರಿಷ್ಕರಿಸಲಾಗಿದೆ. ಎ.15ರಿಂದ ಮೇ 10 ರವರೆಗೆ ಎಲ್ಲಾ ಅಂಗನವಾಡಿ ಕೇಂದ್ರಗಳು ಬೆಳಿಗ್ಗೆ ೮ರಿಂದ ಮಧ್ಯಾಹ್ನ 12ರವರೆಗೆ ಕಾರ್ಯನಿರ್ವಹಿಸಬೇಕು. ಪ್ರತಿವರ್ಷ ನೀಡಬೇಕಾದ ಬೇಸಿಗೆ ರಜೆಯ ಅವಧಿ ಮೇ.11ರಿಂದ ಮೇ.26ರವರೆಗೆ 15 ದಿನ ಆಗಿರುತ್ತದೆ. ಮೇ 27ರಂದು ಅಂಗನವಾಡಿ ಕೇಂದ್ರಗಳನ್ನು ಪುನರ್ ಪ್ರಾರಂಭಿಸಿ, ಈ ಹಿಂದಿನಂತೆ ಬೆಳಗ್ಗೆ 9.30ರಿಂದ ಸಾಯಂಕಾಲ 4.00 ಗಂಟೆಯವರಿಗೆ ನಡೆಸಬೇಕು, ಮಕ್ಕಳಿಗೆ ಬಿಸಿಯೂಟ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಲೋಕಸಭಾ ಚುನಾವಣೆಯ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ತಪ್ಪದೇ ಕಾರ್ಯ ನಿರ್ವಹಿಸಬೇಕು, ಎ.೧೫ರಿಂದ ಮೇ 26ರವರೆಗೆ ಎಲ್ಲಾ ಅಂಗನವಾಡಿ ಕೇಂದ್ರದ ಫಲಾನುಭವಿಗಳಿಗೆ ನಿಯಮಾನುಸಾರ ಟಿಹೆಚ್‌ಆರ್ ನೀಡಬೇಕು ಮತ್ತು ಪೂರಕ ಪೌಷ್ಟಿಕ ಆಹಾರ ವಿತರಣೆ ಮಾಡಬೇಕು, ಬೇಸಿಗೆ ರಜಾ ಅವಧಿ ಹೊರತುಪಡಿಸಿ ಉಳಿದ ಎಲ್ಲಾ ಕೆಲಸದ ಅವಧಿಯಲ್ಲಿ ಕಡ್ಡಾಯವಾಗಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಕೇಂದ್ರದಲ್ಲಿರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Leave a Comment

error: Content is protected !!