ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶ

Suddi Udaya

ಕೊಯ್ಯೂರು: ಇತಿಹಾಸ ಪ್ರಸಿದ್ಧ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಜನಾಂಗಕ್ಕೂ ಅವಿನಾಭಾವ ಸಂಬಂಧವಿದೆ. ಅಲ್ಲಿನ ದೇವರ ರಥವನ್ನು ಮಲೆಕುಡಿಯರೇ ಕಟ್ಟುವುದು ವಿಶೇಷವಾಗಿದ್ದು, ಅಂತಹ ಕೌಶಲ ಮಲೆಕುಡಿಯರಿಗೆ ಒದಗಿ ಬಂದಿರುವುದು ದೇವರ ಆಶೀರ್ವಾದವೇ ಆಗಿದೆ. 1837ನೇ ಇಸವಿಯಲ್ಲಿ ಮಲೆಕುಡಿಯ ಸಮುದಾಯದ ಕುರ್ತು ಕುಡಿಯ, ಚೆಟ್ಟಿ ಕುಡಿಯ ಎಂಬವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟು ಸ್ವರ್ಗ ಸೇರಿದ್ದಾರೆ. ಅಂತಹ ವೀರರಾದ ಹೆಮ್ಮೆಯ ಹಿರಿಯರನ್ನು ಹೊಂದಿದ ಸಮುದಾಯ ಮಲೆಕುಡಿಯ ಸಮುದಾಯವಾಗಿದೆ ಎಂದು ತುಳುವ ಬೊಳ್ಳಿ ಎಂದೇ ಖ್ಯಾತರಾಗಿರುವ ತುಳು ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಕತ್ತಲ್ ಸರ್ ಹೇಳಿದರು.


ಅವರು ಎ. 2೦ ರಂದು ಬೆಳ್ತಂಗಡಿಯ ಕೊಯ್ಯೂರು-ಶಿವಗಿರಿಯಲ್ಲಿ ನಡೆದ ಮಲೆಕುಡಿಯರ ಸಮುದಾಯ ಭವನದಲ್ಲಿ ಕೋಲೋಡಿ ದಿ| ಎಲ್ಯಣ್ಣ ಮಲೆಕುಡಿಯ ವೇದಿಕೆಯಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಮಲೆಕುಡಿಯರ ವಾರ್ಷಿಕ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು.


ಅಧ್ಯಕ್ಷತೆ ವಹಿಸಿದ್ದ ಮಲೆಕುಡಿಯರ ಸಂಘ (ರಿ.) ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಹರೀಶ್ ಎಳನೀರು ಮಾತನಾಡಿ ಸಮುದಾಯದ ಅಭಿವೃದ್ಧಿಗಾಗಿ ಸಂಘವು ಸದಾ ಪ್ರಯತ್ವನ್ನು ಮಾಡುತ್ತದೆ. ಮಲೆಕುಡಿಯ ಜೀವನ ಮಟ್ಟ ಸುಧಾರಣೆಗಾಗಿ ಈ ಬಾರಿ ಸಮುದಾಯದ ಕುಟುಂಬಗಳ ಸಮೀಕ್ಷೆಯನ್ನು ಸಂಘದ ವತಿಯಿಂದ ಮಾಡಿ, ಮಲೆಕುಡಿಯರ ಸಮಸ್ಯೆಗಳನ್ನು ಸರಕಾರದ ಮುಂದಿಟ್ಟು ಪರಿಹಾರ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದರು.


ಕಂಬಳ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಲೆಕುಡಿಯ ಸಮುದಾಯದ ನಾರಾಯಣ ಪರಂಬೇರು, ಜನಪದ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕುರ್ಲೆ ಕಿಟ್ಟ ಮಲೆಕುಡಿಯ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಜೀವ ಶಿರಂಕಲ್ಲು ಅವರನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಜೊತೆಗೆ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಮತ್ತು ಸ್ಪರ್ಧಾತ್ಮಕ ಜ್ಞಾನ ಕೋಶ ಕೃತಿಕಾರರಾದ ಪ್ರತಿಕ್ಷಾ ಧರ್ಮಸ್ಥಳ ಪುರಸ್ಕರಿಸಲಾಯಿತು. ವಿದ್ಯಾರ್ಥಿ ಲೋಹಿತ್ ಬರೆಂಗಾಯ ನಿರ್ದೇಶಿಸಿದ ಚಲನಚಿತ್ರದ ಪೋಸ್ಟರ್‌ನ್ನು ಬಿಡುಗಡೆ ಮಾಡಲಾಯಿತು.


ವೇದಿಕೆಯಲ್ಲಿ ಮಲೆಕುಡಿಯ ಸಂಘ ರಾಜ್ಯ ಸಮಿತಿಯ ಅಧ್ಯಕ್ಷ ಶ್ರೀಧರ್ ಗೌಡ ಈದು, ಉಪಾಧ್ಯಕ್ಷೆ ವಸಂತಿ ನೆಲ್ಲಿಕಾರು, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷ ಗಂಗಾಧರ್ ಗೌಡ ಈದು, ಚಲನಚಿತ್ರ ನಿರ್ದೇಶಕ ಪ್ರಸಾದ್ ಪೂಜಾರಿ ಚಲನ ಚಿತ್ರ ನಿರ್ಮಾಪಕ ಹೇಮಂತ್ ಸುವರ್ಣ, ಬೆಳ್ತಂಗಡಿ ತಾ. ಸಮಿತಿ ಅಧ್ಯಕ್ಷ ಶಿವರಾಮ ಉಜಿರೆ, ಮೂಡಬಿದಿರೆಯ ಅಣ್ಣಿ ಪಣಪಿಲ, ಗ್ರಾ. ಪಂ ಅಧ್ಯಕ್ಷೆ ದಯಾಳಿನಿ ಉಪಸ್ಥಿತರಿದ್ದರು.


ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊಳಲಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದ.ಕ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯೇಂದ್ರ ಎಂ ನಿಡ್ಲೆ ಸ್ವಾಗತಿಸಿ, ಉಪಾಧ್ಯಕ್ಷ ಮಾಧವ ಸುಬ್ರಹ್ಮಣ್ಯ ಧನ್ಯವಾದ ಸಲ್ಲಿಸಿ, ಅಶ್ವಿನಿ ಧರ್ಮಸ್ಥಳ ಕಾರ್ಯಕ್ರಮ ನಿರೂಪಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಮತಿ ಚಂದ್ರಕಲಾ ಕುಲ್ಕುಂದ-ಸುಬ್ರಹ್ಮಣ್ಯ ಅವರು ಚಾಲನೆ ನೀಡಿ ಶುಭ ಹಾರೈಸಿದರು. ಮಲೆಕುಡಿಯ ಸಮುದಾಯದ ಮಕ್ಕಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ನೃತ್ಯ ರೂಪಕ ಮಹಿಷ ಮರ್ದಿನಿ, ತುಳು ಸಾಮಾಜಿಕ ನಾಟಕ ಉಡಲ್‌ದ ಉರಿ, ಹಾಗೂ ಯಕ್ಷಗಾನ ಪ್ರಸಂಗ ನರಕಾಸುರ ವಧೆ ಪ್ರದರ್ಶನಗೊಂಡಿತು.

Leave a Comment

error: Content is protected !!