ಬೆಳ್ತಂಗಡಿ : ಜಿಲ್ಲಾ ಸ್ವೀಪ್ ಸಮಿತಿಯ ನಿರ್ದೇಶನದಂತೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ-200 ರಲ್ಲಿ ಸ್ವೀಪ್ ಸಮಿತಿಯಿಂದ ತಾಲೂಕಿನ 241 ಬಿಎಲ್ ಒ ಗಳಿಗೆ ಒಂದು ದಿನದ ತರಬೇತಿ, ತಾಲೂಕಿನ ಪ್ರೌಢಶಾಲೆಗಳು, ಪದವಿಪೂರ್ವ ಮತ್ತು ಪದವಿ ಕಾಲೇಜಿನ ನೂರಕ್ಕೂ ಹೆಚ್ಚು ಮತದಾರ ಸಾಕ್ಷರತಾ ಸಂಘಗಳ ಸಂಚಾಲಕರಿಗೆ ಒಂದು ದಿನದ ತರಬೇತಿ ನೀಡಲಾಗಿದೆ ಎಂದು ತಾಪಂ ಇಒ ವೈಜಣ್ಣ ಹೇಳಿದರು.
ಅವರು ಬುಧವಾರ ತಾಪಂನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಾಲೂಕು ಸ್ವೀಪ್ ಸಮಿತಿಯು ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಮತದಾನವಾದ ನಾರಾವಿ, ನಡ, ಚಾರ್ಮಾಡಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗಳ ಸಹಕಾರದಿಂದ ಬೀದಿ ನಾಟಕ, ಪ್ರತಿ ಮನೆಗೆ ಮನವಿ ಪತ್ರ ಹಂಚಿಕೆ ಮತ್ತು ಭವಿಷ್ಯದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಿದೆ.
ತಾಲೂಕಿನಾದ್ಯಂತ ಸುಮಾರು 15 ಕಡೆಗಳಲ್ಲಿ ಯುವ ಮತ್ತು ಭವಿಷ್ಯದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಪೋಸ್ಟರ್ ಅಭಿಯಾನ: ತಾಲೂಕಿನ 1000 ಸರಕಾರಿ ಮತ್ತು ಅರೆ ಸರಕಾರಿ ಕಟ್ಟಡಗಳಿಗೆ ಪೋಸ್ಟರ್ ಗಳನ್ನು ಅಂಟಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದೊಂದಿಗೆ, ಮತಗಟ್ಟೆಗಳು ಕೇಂದ್ರೀಕೃತವಾಗಿದ್ದ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗಿದೆ.
ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಸಹಕಾರದಿಂದ 48 ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಎನ್.ಆರ್. ಎಲ್.ಎಂ ಸಂಜಿವಿನಿ ಯೋಜನೆಯ ಎಂ.ಬಿ.ಕೆ, ಎಲ್.ಸಿ.ಆರ್.ಪಿ, ಪಶುಸಖಿ, ಕೃಷಿ ಸಖಿ ಹಾಗೂ ವಿಶೇಷ ಚೇತನ ಪ್ರತಿನಿಧಿಗಳಿಗೆ ತರಬೇತಿ ನೀಡಿ ಅವರ ಮೂಲಕ ಮಹಿಳಾ ಮತದಾರರು ಮತ್ತು ವಿಶೇಷ ಚೇತನ ಮತದಾರರನ್ನು ಜಾಗೃತಗೊಳಿಸುವ ಪ್ರಯತ್ನ ಮಾಡಲಾಗಿದೆ.
ಪತ್ರ ಅಭಿಯಾನ: ಮಾಲಾಡಿ ಗ್ರಾಮ ಪಂಚಾಯಿತಿ ಹಾಗೂ ಸ.ಹಿ.ಪ್ರಾ.ಶಾಲೆ ಮಾಲಾಡಿಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಂದ ಅವರ ಸ್ನೇಹಿತರ ಪೋಷಕರಿಗೆ ಪತ್ರ ಬರೆದು ತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಲಾಗಿದೆ.
ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್ ವಸ್ತ್ರದ್ ರವರ ನೇತೃತ್ವದಲ್ಲಿ ಕೊಕ್ಕಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರು ಹಾಗೂ ಸುಲ್ಕೇರಿಯಲ್ಲಿ ಮಲೆಕುಡಿಯ ಸಮುದಾಯದ ಮತದಾರರೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕಿನ ಎರಡು ಅನನ್ಯ ಮತಗಟ್ಟೆ ಎನಿಸಿರುವ ಬಾಂಜಾರು ಮಲೆ ಮತಗಟ್ಟೆ (ಮ.ಸಂ 86) ಮತ್ತು ಎಳನೀರು ಮತಗಟ್ಟೆ ಸಂಖ್ಯೆ15 ರಲ್ಲಿ ಶೇ. 100 ರಷ್ಟು ಮತದಾನ ಮಾಡಿಸುವುದಕ್ಕಾಗಿ ಮತದಾರರೊಂದಿಗೆ ಹಲವು ಸುತ್ತಿನ ಸಂವಾದ ಕಾರ್ಯಕ್ರಮ ನಡೆಸಲಾಗಿದೆ.
ಶೇ 100 ರ ಗುರಿ ತಲುಪಲು ದ.ಕ ಜಿ.ಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಆನಂದ್ ಕೆ. ನೇತೃತ್ವದಲ್ಲಿ ಬಾಂಜಾರು ಮಲೆಯ ಮಲೆಕುಡಿಯ ಸಮುದಾಯದ ಮತದಾರರೊಂದಿಗೆ ವಿಶೇಷ ಸಂವಾದ ನಡೆಸಲಾಗಿದೆ.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 9 ಮಾದರಿ ಮತಗಟ್ಟೆಗಳನ್ನು ಗುರುತಿಸಿದ್ದು, ಅದರಲ್ಲಿ ಐದು ಸಖಿ ಮತಗಟ್ಟೆ ಹಾಗೂ ತಲಾ ಒಂದರಂತೆ ವಿಶೇಷ ಚೇತನರ ನಿರ್ವಹಣೆ , ಯುವಜನ, ಧ್ಯೇಯಾಧಾರಿತ ಮತ್ತು ಸಾಂಪ್ರದಾಯಿಕ ಮತಗಟ್ಟೆಗಳಿಗೆ ವರ್ಣರಂಜಿತ ಚಿತ್ತಾಕರ್ಷಣೆ ನೀಡಲಾಗಿದೆ.
ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದಡಿ ತಾಲೂಕಿನ 241 ಮತಗಟ್ಟೆಗಳಲ್ಲಿ ಏ. 21 ರಂದು ಕಾಲ್ನಡಿಗೆ ಜಾಥಾ, ಧ್ವಜಾರೋಹಣ ಹಾಗೂ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದೆ.
ಉಜಿರೆ ಎಸ್ ಡಿಎಂ ಹಾಗೂ ಗುರುದೇವ ಕಾಲೇಜಿನ ಎನ್ನೆಸ್ಸೆಸ್ ಘಟಕದ ಶಿಬಿರಾರ್ಥಿಗಳ ಸಹಕಾರದೊಂದಿಗೆ ಕಡಿಮೆ ಮತದಾನವಾಗಿರುವ ಮತಗಟ್ಟೆ ವ್ಯಾಪ್ತಿಯಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸಿ ಮತದಾನ ಜಾಗೃತಿ ಮೂಡಿಸಲಾಗಿದೆ.
ತಾಲೂಕಿನ ಐದು ಸಖಿ ಮತಗಟ್ಟೆಗಳ ಒಟ್ಟು 24 ಮಹಿಳಾ ಅಧಿಕಾರಿಗಳಿಗೆ ಗುಲಾಬಿ ಬಣ್ಣದ ಸೀರೆಗಳನ್ನು ವಿತರಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ ವ್ಯವಸ್ಥಾಪಕ ,ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಪ್ರಶಾಂತ್ ಡಿ., ಮ್ಯಾನೇಜರ್ ಗಣೇಶ್, ಜಿಲ್ಲಾ ಸ್ವೀಪ್ ಸಮಿತಿ ಮಾಸ್ಟರ್ ಟ್ರೈನರ್ ಯೋಗೇಶ ಆರ್., ದಿವ್ಯಾ ಕುಮಾರಿ, ಶುಭ ಕೆ. ಉಪಸ್ಥಿತರಿದ್ದರು.