ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಇಂದು (ಮೇ 18) ಮಧ್ಯಾಹ್ನದ ಹೊತ್ತು ಕಾಡಾನೆ ಮತ್ತೆ ಕಂಡು ಬಂದಿದೆ.
ಈ ವಾರದಲ್ಲಿ ಇದು ಕಾಡಾನೆ ಕಂಡು ಬಂದಿರುವುದು ನಾಲ್ಕನೇ ಬಾರಿ. ಸೋಮವಾರದಿಂದ ಬುಧವಾರದವರೆಗೆ ಇಲ್ಲಿನ ರಸ್ತೆಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ಅಲ್ಲಲ್ಲಿ ಕಾಡಾನೆ ಹಗಲಲ್ಲಿ ಹಾಗೂ ರಾತ್ರಿ ಹೊತ್ತು ಕಂಡುಬಂದಿತ್ತು. ಬಳಿಕ ಅರಣ್ಯ ಇಲಾಖೆ ಘಾಟಿ ಭಾಗದಲ್ಲಿ ರಾತ್ರಿ ಗಸ್ತು ಕಾರ್ಯಾಚರಣೆ ಆರಂಭಿಸಿದೆ. ಇದರ ನಂತರ ಎರಡು ದಿನ ಕಾಡಾನೆ ಕಂಡು ಬಂದಿರಲಿಲ್ಲ.
ಆದರೆ ಶನಿವಾರ ಮಧ್ಯಾಹ್ನ 8ನೇ ತಿರುವಿನಲ್ಲಿ ಕಾಡಾನೆ ಮತ್ತೆ ಕಂಡುಬಂದಿದೆ. ರಸ್ತೆ ಬದಿ ಆಹಾರ ತಿನ್ನುತ್ತಿದ್ದ ಕಾಡಾನೆ ಬಳಿಕ ಅರ್ಧ ಗಂಟೆ ಹೊತ್ತು ಅಲ್ಲೇ ವಿರಮಿಸಿತ್ತು. ಆನೆ ರಸ್ತೆ ವ್ಯಾಪ್ತಿಯಲ್ಲಿ ಇದ್ದ ಕಾರಣ ಸುಮಾರು ಒಂದು ತಾಸು ಕಾಲ ವಾಹನ ಸವಾರರು ಕಾದು ನಿಂತರು.
ಅರಣ್ಯ ಇಲಾಖೆ ಡಿ ಆರ್ ಎಫ್ ಒ ನಾಗೇಶ್ ಸಿಬ್ಬಂದಿಗಳಾದ ದಿವಾಕರ ಮತ್ತು ಗೋಪಾಲ ಸ್ಥಳಕ್ಕೆ ಭೇಟಿ ನೀಡಿದಾಗ ಆನೆ ಅಲ್ಲಿಂದ ಕಾಡಿನ ಕಡೆಗೆ ಮುಂದುವರೆದಿತ್ತು. ತಂಡವು ಕಾಡಿನ ಒಳಭಾಗದಲ್ಲಿ ಅಲ್ಲಲ್ಲಿ ಪರಿಶೀಲನೆ ನಡೆಸಿತು. ಈ ಹೊತ್ತಿಗೆ ಆನೆ ಅಲ್ಲಿಂದ ಬೇರೆ ಜಾಗಕ್ಕೆ ತನ್ನ ಠಿಕಾಣಿಯನ್ನು ಬದಲಾಯಿಸಿತ್ತು.