ಬೆಳ್ತಂಗಡಿ: ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಹಾಗೂ ಜೀವನ ಮೌಲ್ಯಗಳನ್ನು ರೂಪಿಸುವುದೇ ಶಿಕ್ಷಣದ ಉದ್ದೇಶವಾಗಿದೆ ಎಂದು ಕೊಕ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ರೇಂಜರ್ ಲೀಡರ್ ಶ್ರೀಮತಿ ಸೀತಾಲಕ್ಷ್ಮಿ ಹೇಳಿದರು.
ಅವರು ವಾಣಿ ಶಿಕ್ಷಣ ಸಂಸ್ಥೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಸಹಯೋಗದೊಂದಿಗೆ ನಡೆದ ಎರಡು ದಿವಸಗಳ ಬೇಸಿಗೆ ಶಿಬಿರದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಾ, ಪ್ರತಿಯೊಂದು ಕೆಲಸವನ್ನು ಇಷ್ಟಪಟ್ಟು ಮಾಡಿದಾಗ ಯಶಸ್ಸು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಹುಟ್ಟಿದ ಮನೆ, ಊರು, ಸಮಾಜಕ್ಕೆ ಹೆಸರನ್ನು ತಂದುಕೊಡುವಲ್ಲಿ ಸಫಲರಾಗಬೇಕು. ಪ್ರತಿ ಸೋಲಿನಲ್ಲೂ ಗೆಲುವಿನ ನಿರೀಕ್ಷೆಯನ್ನು ಹೊಂದಿರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಘಟಕದ ಅಧ್ಯಕ್ಷ ಹಾಗೂ ವಾಣಿ ಕಾಲೇಜಿನ ಪ್ರಾಂಶುಪಾಲ ಡಿ ಯದುಪತಿ ಗೌಡ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲ ವಿಷ್ಣು ಪ್ರಕಾಶ್, ಗೈಡ್ಸ್ ಕ್ಯಾಪ್ಟನ್ ಗಳಾದ ಶ್ರೀಮತಿ ಶೋಭಾ ನವೀನ್, ಶ್ರೀಮತಿ ಸುಮಲತಾ, ಕಬ್ ಮಾಸ್ಟರ್ ಶ್ರೀಮತಿ ಹೇಮಲತಾ, ಪ್ಲಾಕ್ ಲೀಡರ್ ಶ್ರೀಮತಿ ನಮಿತಾ ಉಪಸ್ಥಿತರಿದ್ದರು. ಕಾಲೇಜಿನ ರೋವರ್ ಸ್ಕೌಟ್ ಲೀಡರ್ ಬೆಳಿಯಪ್ಪ. ಕೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರ ವಿವರ ನೀಡಿದರು.
ಕಾಲೇಜಿನ ರೇಂಜರ್ ಲೀಡರ್ ಶ್ರೀಮತಿ ರಕ್ಷಾ ಸ್ವಾಗತಿಸಿದರು. ಗೈಡ್ ಕ್ಯಾಪ್ಟನ್ ಶ್ರೀಮತಿ ಭವ್ಯ ಧನ್ಯವಾದವಿತ್ತರು. ಗೈಡ್ಸ್ ವಿದ್ಯಾರ್ಥಿನಿಯರಾದ ತ್ರಿಷಾ ಮತ್ತು ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.