ಉಜಿರೆ: ರಕ್ತದಾನ ಮಾಡುವವರು ಹಾಗೂ ತೆಗೆದುಕೊಳ್ಳುವವರು ಯಾವುದೇ ಪ್ರಚಾರದ ಬಯಕೆ ಇಲ್ಲದೆ ಮಾಡುವ ರಕ್ತದಾನವು ಇತರ ಎಲ್ಲಾ ದಾನಗಳಿಗಿಂತ ಶ್ರೇಷ್ಠವಾಗಿದೆ ಎಂದು ಬೆಳ್ತಂಗಡಿ ರೋಟರಿ ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪೂರನ್‌ವರ್ಮ ಹೇಳಿದರು.
ಅವರು ಭಾನುವಾರ ಉಜಿರೆಯಲ್ಲಿ ಶಾರದಾಮಂಟಪದಲ್ಲಿ ಬೆಳ್ತಂಗಡಿ ರೋಟರಿಕ್ಲಬ್ ಮತ್ತು ಮಂಗಳೂರಿನ ಕೆ.ಎಂ.ಸಿ. ರಕ್ತ ಕೇಂದ್ರ ಹಾಗೂ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಆಯೋಜಿಸಿದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.ರಕ್ತದಾನ ಮಾಡಿದವರಿಗೆ ಆರೋಗ್ಯವರ್ಧನೆಯೊಂದಿಗೆ ಮಾನಸಿಕಶಾಂತಿ, ನೆಮ್ಮದಿ ಸಿಗುತ್ತದೆ. ಜೊತೆಗೆ ಧನಾತ್ಮಕ ಚಿಂತನೆಯೊಂದಿಗೆ ಧನ್ಯತಾ ಭಾವವೂ ಮೂಡಿ ಬರುತ್ತದೆ ಎಂದು ಅವರು ಹೇಳಿದರು.
ವಿದೇಶಗಳಿಗಿಂತಲೂ ಭಾರತದಲ್ಲಿ ಆರೋಗ್ಯ ಸೇವೆ ಉತ್ತಮವಾಗಿ ನಡೆಯುತ್ತಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ರಕ್ತದಾನ ಶಿಬಿರದಲ್ಲಿ ಸಹಕರಿಸಿದ ಎಲ್ಲರನ್ನೂ ಅವರು ಅಭಿನಂದಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ಯಾಡಿ ಸೇವಾಭಾರತಿಯ ಸಂಚಾಲಕ ವಿನಾಯಕ ರಾವ್ ಕನ್ಯಾಡಿ ಮಾತನಾಡಿ ರಕ್ತದಾನದ ಮಹತ್ವವನ್ನು ವಿವರಿಸಿ, ಕನ್ಯಾಡಿಯಲ್ಲಿ ಸೇವಾ ಭಾರತಿಗೆ ನಾಲ್ಕು ಕೋಟಿ ರೂ. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಿ ಸೇವಾ ಕಾರ್ಯಗಳನ್ನು ವಿಸ್ತರಿಸಲಾಗುವುದು. ಈಗಾಗಲೇ ಅನೇಕ ದಾನಿಗಳು ಹಾಗೂ ಸಂಸ್ಥೆಗಳು ಉದಾರ ನೆರವಿನ ಭರವಸೆ ನೀಡಿದ್ದಾರೆ ಎಂದರು.ಉಜಿರೆ ಶರತ್‌ಕೃಷ್ಣ ಪನ್ವೆಟ್ನಾಯ ಅಧ್ಯಕ್ಷತೆ ವಹಿಸಿದರು.ಒಕ್ಕಲಿಗ ಸೇವಾಸಂಘದ ಅಧ್ಯಕ್ಷ ಧರ್ಣಪ್ಪ ಗೌಡ, ಬಂಟರಸಂಘದ ಅಧ್ಯಕ್ಷೆ ವನಿತಾ ಶೆಟ್ಟಿ, ಜಯಶ್ರೀಪ್ರಕಾಶ್, ಶ್ಯಾಮ್ ಭಟ್ ಅತ್ತಾಜೆ, ಬೆಳ್ತಂಗಡಿ ಸಿ.ಎ. ಬ್ಯಾಂಕ್ ಅಧ್ಯಕ್ಷ ಅಜಿತ್‌ಕುಮಾರ್ ಆರಿಗ ಮತ್ತು ಜನಾರ್ದನ್ ಕಾನರ್ಪ ಉಪಸ್ಥಿತರಿದ್ದರು.
ಕನ್ಯಾಡಿ ಸೇವಾಭಾರತಿ ಅಧ್ಯಕ್ಷರಾದ ಸ್ವರ್ಣಗೌರಿ ಸ್ವಾಗತಿಸಿದರು. ಮಾಧವ ಗೌಡ ಧನ್ಯವಾದವಿತ್ತರು. ಡಾ. ಶ್ರೀಧರ ಭಟ್ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ-ಸೇವಕರು ರಕ್ತದಾನ ಶಿಬಿರದ ಸಂಘಟನೆಯಲ್ಲಿ ಸಕ್ರಿಯ ಸಹಕಾರ ನೀಡಿದರು. ಶಿಬಿರದಲ್ಲಿ 167 ಯೂನಿಟ್ ರಕ್ತ ಸಂಗ್ರಹವಾಗಿದೆ