ಬೆಳ್ತಂಗಡಿ: ಭಾಷೆ ಸಂವಾದ ಮಾಧ್ಯಮ. ಅದು ನಮ್ಮನ್ನು ಬೆರೆತು ಕಲೆತು ನಲಿಯುವಂತೆ ಮಾಡುತ್ತದೆ. ಊಟ ಬಲ್ಲವನಿಗೆ ರೋಗವಿಲ್ಲ ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಸುಳ್ಳಾಗದು. ರವೀಂದ್ರ ಶೆಟ್ಟಿಯವರಿಗೆ ಈ ಗಾದೆ ಮಾತು ಬಹಳ ಚೆನ್ನಾಗಿ ಒಪ್ಪುತ್ತದೆ. ಬಹುಭಾಷಾ ಪಂಡಿತ ಎಂದೇ ಹೇಳಬಹುದು. ಯಾವ ಭಾಷೆ ಮಾತನಾಡುವ ವ್ಯಕ್ತಿ ಎದುರಾದರೂ ಅವರ ಭಾಷೆಯಲ್ಲೇ ಸಂಭಾಷಣೆ ಆರಂಭಿಸಿ ಅವರನ್ನು ಸಂತೋಷಪಡಿಸುವ ಜಾಣ್ಮೆ ಇವರಲ್ಲಿದೆ.
1983 ರಿಂದ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ಉದ್ಯೋಗಿಯಾಗಿದ್ದುಕೊಂಡು 41 ವರ್ಷಗಳ ಸುದೀರ್ಘ ಸೇವೆಯಲ್ಲಿ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಇದೀಗ ಬೆಳ್ತಂಗಡಿ ಶಾಖೆಯಲ್ಲಿ ಮೇನೇಜರ್ ಹುದ್ದೆಯಲ್ಲಿ ನಿವೃತ್ತಿ ಪಡೆಯುತ್ತಿದ್ದಾರೆ.
ರವೀಂದ್ರ ಶೆಟ್ಟಿರವರು ಸಾರ್ವಜನಿಕವಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿಯೂ ಸಕ್ರೀಯವಾಗಿ ಪಾಲ್ಗೊಂಡು ಎಲ್ಲರ ಪ್ರೀತಿ ವಿಶ್ವಾಸ ಗಳಿಸಿಕೊಂಡವರು. ರಾಜ್ಯ ಪ್ರಶಸ್ತಿ ವಿಜೇತ ಶ್ರೀ ಉಮಾಮಹೇಶ್ವರ ಯುವಕ ಮಂಡಲ ಬಳಂಜ ಇದರ ಅಧ್ಯಕ್ಷರಾಗಿ, ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ, ಬೆಳ್ತಂಗಡಿ ಮಂಜುಶ್ರೀ ಜೇಸಿಯ ಅಧ್ಯಕ್ಷರಾಗಿ ಮತ್ತು ವಲಯಾಧಿಕಾರಿಯಾಗಿ, ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ಸಂಪುಟದ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಾಗಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಬೆಳ್ತಂಗಡಿ ತಾಲೂಕಿನ ಮಾಜಿ ಅಧ್ಯಕ್ಷರಾಗಿ, ಉಜಿರೆ ಶ್ರೀ ಶಾರದೋತ್ಸವ ಸಮಿತಿ ಹಾಗು ಶ್ರೀ ಗಣೇಶೋತ್ಸವ ಸಮಿತಿ ಸದಸ್ಯರಾಗಿ ಸಕ್ರಿಯವಾಗಿ ಪಾಲ್ಗೊಂಡು ಎಲ್ಲರಿಗೂ ಚಿರಪರಿಚಿರಾಗಿದ್ದಾರೆ.
ಪತ್ನಿ ಶ್ರೀಮತಿ ಭಾರತಿ ಆರ್ ಶೆಟ್ಟಿಯವರು, ಪುತ್ರ ಸುಮಂತ್ ಹಾಗೂ ಪುತ್ರಿ ಸುಶ್ಮಿತ ಜೊತೆ ಸುಖೀ ಸಂಸಾರ ನಡೆಸುತ್ತಿದ್ದಾರೆ.