ಬೆಳ್ತಂಗಡಿ: ಬಿದಿರು ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು ಇವರು ಸಿಎಸ್ಆರ್ ನಿಧಿಯಲ್ಲಿ ಬಿದಿರು ಬೆಳೆಸುವ ಯೋಜನೆ ಹಾಕಿಕೊಂಡಿದ್ದು, ಪ್ರಾರಂಭಿಕ ಹಂತದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ 25 ಸಾವಿರ ಬಿದಿರು ಸಸಿಗಳನ್ನು ಉಚಿತವಾಗಿ ರೈತರಿಗೆ ವಿತರಿಸಲಿದ್ದಾರೆ.
ಈ ಯೋಜನೆಯು ಬಿದಿರು ಸೊಸೈಟಿ ಆಫ್ ಇಂಡಿಯಾ, ಬೆಂಗಳೂರು ಹಾಗೂ ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘ (ನಿ.) ಉಜಿರೆ ಇವರು ಜಂಟಿಯಾಗಿ ಅನುಷ್ಠಾನ ಮಾಡುವ ಯೋಜನೆಯಾಗಿದ್ದು ಬಿದಿರು ಕೃಷಿಯಲ್ಲಿ ಆಸಕ್ತ ಕೃಷಿಕರು ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಮುಖ್ಯ ಕಚೇರಿ, ಉಜಿರೆಯಲ್ಲಿ ಈ ಬಗ್ಗೆ ಅವಶ್ಯಕ ಅರ್ಜಿಯನ್ನು ಜೂ.20 ರ ಮೊದಲು ಸಲ್ಲಿಸಬೇಕಾಗಿರುತ್ತದೆ.
ಈ ಯೋಜನೆಯಲ್ಲಿ ಕನಿಷ್ಟ 50 ಗಿಡ ಹಾಗೂ ಗರಿಷ್ಟ 600 ಗಿಡಗಳನ್ನು ಉಚಿತವಾಗಿ ನೀಡಲಾಗುವುದು. ಉಚಿತ ವಿತರಿಸಿದ ಬಿದಿರು ಗಿಡಗಳನ್ನು ಕಡ್ಡಾಯವಾಗಿ ನಾಟಿಮಾಡಬೇಕು ಹಾಗೂ ಬಿದಿರು ಸೊಸೈಟಿ ಆಫ್ ಇಂಡಿಯಾ ಇಲ್ಲಿನ ಪ್ರತಿನಿಧಿಗೆ ಗಿಡದ ಬೆಳವಣಿಗೆ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿರುತ್ತದೆ. ಮುಂದಿನ ಎರಡು ವರ್ಷ ಉತ್ತಮವಾಗಿ ಬೆಳೆಸಿದ ಸಸಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು. ಅರ್ಜಿ ನೀಡಲು ಇಚ್ಚಿಸುವ ರೈತರು ತಮ್ಮ ಸ್ವವಿವರದೊಂದಿಗೆ ಬಿದಿರು ಕೃಷಿ ಮಾಡಲಿಚ್ಚಿಸುವ ಜಾಗದ ವಿವರ ಮತ್ತು ಆಧಾರ್ ಪ್ರತಿಯೊಂದಿಗೆ ಕಚೇರಿ ಸಮಯದಲ್ಲಿ ಸಂಘವನ್ನು ಸಂಪರ್ಕಿಸಬೇಕಾಗಿ ತಿಳಿಸಿದೆ.