ಬೆಳ್ತಂಗಡಿ : ಇಂದಿನ ಸ್ಪರ್ಧಾತ್ಮಕ ಭಜನೆಯಿಂದಾಗಿ ಮೂಲ ಭಜನೆಗೆ ಚ್ಯುತಿ ಬಂದು ಭಜನೆಯಲ್ಲಿ ವಿಭಜನೆಯಾಗಬಾರದು ಭಕ್ತಿಯ ಭಜನೆಯಲ್ಲಿಯೂ ಕೆಲವೊಂದು ನಿಯಮಗಳನ್ನು ಮೈಗೂಡಿಸಿಕೊಳ್ಳಬೇಕು ಹಾಗೂ ಭಜಕರಲ್ಲಿ ಮತ್ತು ತರಬೇತಿದಾರರುಗಳಲ್ಲಿ ಸಮನ್ವಯತೆ ವೃದ್ಧಿಯಾಗಬೇಕು ಎನ್ನುವ ದೂರದೃಷ್ಟಿಯೊಂದಿಗೆ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕು ಭಜನಾ ಪರಿಷತ್ತಿನ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ ಒಳಗಡೆ ಕುಣಿತ ಭಜನಾ ತರಬೇತಿ ನೀಡುತ್ತಿರುವ ತರಬೇತಿದಾರರುಗಳ ಪ್ರಥಮ ಸಭೆ ನಡೆಯಿತು.
ಈ ಸಭೆಯಲ್ಲಿ ಹಲವಾರು ವಿಚಾರಗಳನ್ನು ಚರ್ಚಿಸಿ ಮುಂದಿನ ದಿನಗಳಲ್ಲಿ ಭಕ್ತಿಯ ಭಜನೆಯಲ್ಲಿ ನಿರ್ದಿಷ್ಟವಾದ ಕೆಲವೊಂದು ನಿಯಮಗಳನ್ನು ಪಾಲಿಸುವುದಕ್ಕಾಗಿ ತಾಲೂಕಿನ ಒಳಗಡೆ ಕುಣಿತ ಭಜನಾ ತರಬೇತಿಯನ್ನು ನೀಡುತ್ತಿರುವ ತರಬೇತಿದಾರರುಗಳ ಸಂಘವನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಸಂದೇಶ್ ಮದ್ದಡ್ಕ , ಉಪಾಧ್ಯಕ್ಷರಾಗಿ ಕೃಷ್ಣಪ್ಪಗೌಡ ಅರಸಿನಮಕ್ಕಿ , ಕಾರ್ಯದರ್ಶಿಯಾಗಿ ಹರೀಶ್ ವಿ ನೆರಿಯ, ಸಂಘಟನಾ ಕಾರ್ಯದರ್ಶಿಯಾಗಿ ನಾಗೇಶ್ ನೆರಿಯ, ಸಂಚಾಲಕರಾಗಿ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು ಮೊದಲಾದವರು ಆಯ್ಕೆಯಾಗಿ ಉಳಿದ ತರಬೇತಿದಾರರುಗಳನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಯಿತು ಹಾಗೂ ಸಂಘಟನೆಯನ್ನು ಬಲಪಡಿಸುವುದಕ್ಕಾಗಿ ಹೆಚ್ಚಿನ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ನೂತನ ಸಮಿತಿಗೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷ ವೆಂಕಟೇಶ್ವರ ಭಟ್ ಕಜೆ ವಹಿಸಿದ್ದರು. ವೇದಿಕೆಯಲ್ಲಿ ಭಜನಾ ಪರಿಷತ್ತಿನ ಉಪಾಧ್ಯಕ್ಷ ಜಯಪ್ರಸಾದ್ ಕಡಮ್ಮಾಜಿ, ಕಾರ್ಯದರ್ಶಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು. , ಸುರೇಂದ್ರ ಯೋಜನಾಧಿಕಾರಿ ಬೆಳ್ತಂಗಡಿ ವಲಯ. ಕೃಷಿ ಅಧಿಕಾರಿ ರಾಮ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಸಭೆಯಲ್ಲಿ ಭಜನಾ ಪರಿಷತ್ತಿನ ಸಂಯೋಜಕರುಗಳು ಹಾಗೂ ತಾಲೂಕಿನ ಕುಣಿತ ಭಜನಾ ತರಬೇತಿ ನೀಡುತ್ತಿರುವ ಸಮಾನ ಮನಸ್ಕ ತರಬೇತಿದಾರರುಗಳು ಉಪಸ್ಥಿತರಿದ್ದರು.