ಬೆಳ್ತಂಗಡಿ: ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಅರ್ಹ ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ದೃಷ್ಟಿಯಿಂದ ನ್ಯಾಯವಾದಿ ಮುರಳೀಧರ ಬಲಿಪ ಅವರು ಈ ಪುಣ್ಯ ಕಾರ್ಯಮಾಡುತ್ತಿರುವುದು ಇತರರಿಗೆ ಸ್ಪೂರ್ತಿಯುಂಟು ಮಾಡುವ ಕೆಲಸ. ಸಂಪತ್ತು ನಮ್ಮಲ್ಲಿ ಎಷ್ಟಿದೆ ಎನ್ನುವುದಕ್ಕಿಂತ ಅದನ್ನು ಸಮಾಜಕ್ಕೆ ದಾನ ಮಾಡಬೇಕೆಂಬ ಹೃದಯ ವೈಶಾಲ್ಯತೆ ದೊಡ್ಡದು ಎಂದು ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಿಕ ವಸಂತ ಆಚಾರ್ಯ ಹೇಳಿದರು.
ನ್ಯಾಯವಾದಿ ಹಾಗೂ ನೋಟರಿ ಪಬ್ಲಿಕ್ ಆಗಿರುವ ಮುರಳೀಧರ ಬಲಿಪ ಅವರು ತಮ್ಮ ಬಲಿಪ ರೆಸಾರ್ಟ್ ಮೂಲಕ ಶನಿವಾರ ಹಮ್ಮಿಕೊಂಡಿದ್ದ 9 ಸರಕಾರಿ ಶಾಲೆಗಳಿಗೆ 2.50 ಲಕ್ಷ ರೂ ವೆಚ್ಚದಲ್ಲಿ ಹಮ್ಮಿಕೊಂಡಿದ್ದ ಉಚಿತ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಇನ್ನೋರ್ವ ಪ್ರಧಾನ ಅತಿಥಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಸ್ಥಾಪಕ ಮೋಹನ್ ಕುಮಾರ್ ಲಕ್ಷ್ಮೀ ಗ್ರೂಪ್ಸ್ ಉಜಿರೆ ಅವರು ಮಾತನಾಡಿ, ಮುರಳಿ ಅವರ ಬಾಲ್ಯದ ಸಂಕಷ್ಟದ ನೆನಪುಗಳೇ ಇಂದು ಈ ರೀತಿಯ ಕಾರ್ಯಕ್ಕೆ ಅವರಿಗೆ ಪ್ರೇರಣೆಯೊದಗಿಸಿದೆ. ಹೀರೋಗಳು ಯಾರೆಂದರೆ ಕೇವಲ ಚಲನ ಚಿತ್ರ ನಟರು ಮಾತ್ರವಲ್ಲ. ಸದ್ದಿಲ್ಲದೆ ಇಂತಹಾ ಸೇವೆ ಮಾಡುವ ಮುರಳಿ ಅಂತವರೂ ನಮ್ಮ ಮಕ್ಕಳಿಗೆ ಹೀರೋ ಆಗಿ ಕಾಣುತ್ತಾರೆ. ಬಾಲ್ಯದ ದಿನಗಳಲ್ಲಿ ಕೈ ಗೂಡದ ವಿದ್ಯಾ ಕನಸು ನಮ್ಮ ವೃತ್ತಿ ಬದುಕಿನಲ್ಲಿ ನನಸಾಗಿದೆ ಎಂಬ ತೃಪ್ತಿ ಇದೆ. ಆಯಾಯಾ ಶಾಲೆಯಲ್ಲಿ ಕಲಿತ ಮಕ್ಕಳು ಮುಂದಕ್ಕೆ ಅದೇ ಶಾಲೆಯ ಶ್ರೇಯೋಭಿವೃದ್ದಿಗೆ ದುಡಿದರೆ ಅದೇ ದೊಡ್ಡ ಸೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೆಸಾರ್ಟ್ ಮಾಲಿಕ ಮುರಳೀಧರ ಬಲಿಪ ಅವರು ಮಾತನಾಡಿ, ನಾನು ದಾನಿಯಲ್ಲ ಆದರೆ ವಿದ್ಯಾ ಪ್ರೇಮಿ ಹೌದು. ಬಾಲ್ಯದಲ್ಲಿ ಅತ್ಯಂತ ಬಡತನದಿಂದಿದ್ದ ಇಂದು ನಾವು ಸಮಾಜದಿಂದ ಪಡೆದಿದ್ದೇನೆ. ಅದರಲ್ಲೇ ಇನ್ನೊಬ್ಬರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ. ಅಧಿಕಾರ ಇರುವುದು ಸೇವೆ ಮಾಡುವುದಕ್ಕೆ. ಮತ್ತು ಸಂಪತ್ತು ಇರುವುದು ಅರ್ಹರಿಗೆ ದಾನ ಮಾಡುವುದಕ್ಕೆ ಎಂದರು.ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ ಶೆಟ್ಟಿ ಉಜಿರೆ ಮತ್ತು ಸನ್‌ರಾಕ್ ಆರ್ಗಾನಿಕ್ ರೀಟ್ರೀಟ್ ನ ಮುನ್ನಾ ರೋಷನ್ ಸಿಕ್ವೇರಾ ಸಂದರ್ಭೋಚಿತವಾಗಿ ಮಾತನಾಡಿದರು. ಮಯೂರ್ ಬಲಿಪ ಉಪಸ್ಥಿತರಿದ್ದರು.
ಮನೋರಮಾ ಎಂ ಬಲಿಪ ಪ್ರಾರ್ಥನೆ ಹಾಡಿದರು. ವೃಂದಾ ಬಲಿಪ ಸ್ವಾಗತಿಸಿದರು. ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಕಾರ್ಯಕ್ರಮ ಸಂಯೋಜಿಸಿದರು. ಮಂದಾರ ಬಲಿಪ ಧನ್ಯವಾದವಿತ್ತರು. ಉಷಾ ರೈ, ಶೀಲಾವತಿ ಆಚಾರ್ಯ, ವಾಮನ, ಉದಯ ಹೆಗ್ಡೆ, ಪುಷ್ಪರಾಕ ಶೆಟ್ಟಿ, ಸುರೇಶ್ ಭಟ್ ಸವಣಾಲು ಸಹಕರಿಸಿದರು.