ಬೆಳ್ತಂಗಡಿ ತಾಲೂಕು ಭಜನಾ ಪರಿಷತ್ತಿನ ಸಹಕಾರದೊಂದಿಗೆ ಇತ್ತೀಚೆಗೆ ಅಸ್ತಿತ್ವಕ್ಕೆ ಬಂದ ಬೆಳ್ತಂಗಡಿ ತಾಲೂಕು ಕುಣಿತ ಭಜನಾ ತರಬೇತಿದಾರರ ಸಂಘದ ಪ್ರಥಮ ಸಭೆಯು ಸಂಘದ ಅಧ್ಯಕ್ಷರಾದ ಸಂದೇಶ ಮದ್ದಡ್ಕ ರವರ ಅಧ್ಯಕ್ಷತೆ ಯಲ್ಲಿ ಗುರುವಾಯನಕೆರೆ ಹವ್ಯಕ ಭವನದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸಂಘಟನೆಯನ್ನು ಬಲಪಡಿಸುವುದಕ್ಕಾಗಿ ಸಮಿತಿಗೆ ಪದಾಧಿಕಾರಿಗಳನ್ನು ಸೇರಿಸಿಕೊಳ್ಳಲಾಯಿತು. ಅದರಂತೆ ಉಪಾಧ್ಯಕ್ಷರಾಗಿ ಪಿ. ಬೊಮ್ಮಯ್ಯ ಬಂಗೇರ ಕರಾಯ, ಕೋಶಾಧಿಕಾರಿಯಾಗಿ ಅಕ್ಷಯ್, ಜತೆ ಕಾರ್ಯದರ್ಶಿಗಳಾಗಿ ಕು.ಮಾನ್ಯ ಹಾಗೂ ಅಶೋಕ್ ಆಚಾರ್ಯ, ಸಹ ಸಂಘಟನ ಕಾರ್ಯದರ್ಶಿಗಳಾಗಿ ಕು.ಸಿಂಧೂ ಹಾಗೂ ಶ್ರೀಮತಿ ಸೌಮ್ಯರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅನಾದಿಕಾಲದಿಂದ ನಡೆದು ಬರುತ್ತಿರುವಂತಹ ಕುಣಿತ ಭಜನೆಯ ಇಂದು ಕೆಲವೊಂದು ವಿಚಾರಗಳಲ್ಲಿ ಹಳಿ ತಪ್ಪುತಿರುವುದನ್ನು ಮನಗಂಡು “ಕುಣಿತ ಭಜನೆ ನಿನ್ನೆ ಇಂದು ನಾಳೆ” ವಿಚಾರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಕುಣಿತ ಭಜನೆಯನ್ನು ಮಾಡುವ ಭಜಕರಿಗೆ ಸಂಸ್ಕಾರಯುತವಾಗಿ ಮುನ್ನಡೆಸುವ ಕುರಿತು ಮಾಡಲಾದ ನಿಯಮಗಳ ಕುರಿತು ಚರ್ಚಿಸಿ ಕೆಲವೊಂದು ಪ್ರಮುಖ ನೀತಿ ನಿಯಮಗಳನ್ನು ಭಜಕರಲ್ಲಿ ಅಳವಡಿಸಿಕೊಳ್ಳುವುದಕೋಸ್ಕರ ಒಂದು (ಬೈಲಾ) ನಿಯಮವನ್ನು ರೂಪಿಸಲಾಯಿತು ಮತ್ತು ಈ ನಿಯಮಕ್ಕೆ ಬದ್ದರಾಗಿ ಮುನ್ನಡೆಯುವಂತೆ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕುಣಿತ ಭಜನಾ ತರಬೇತಿ ನೀಡುತ್ತಿರುವ ಎಲ್ಲ ಕುಣಿತ ಭಜನಾ ತರಬೇತಿದಾರರಿಗೆ ಸೂಚಿಸಲಾಯಿತು. ಮತ್ತು ತಾಲ್ಲೂಕಿನ ಎಲ್ಲ ಕುಣಿತ ಭಜನಾ ಮಂಡಳಿಗಳು ಕೂಡ ಈ ನಿಯಮಗಳನ್ನು ತಮ್ಮ ಮಂಡಳಿಗಳಲ್ಲಿ ಅನುಸರಿಸುವಂತೆ ವಿನಂತಿಸಲಾಯಿತು. ಮತ್ತು ಈ ಕುರಿತು ತಾಲ್ಲೂಕಿನ ಎಲ್ಲ ಕುಣಿತ ಭಜನಾ ಮಂಡಳಿಯವರೊಂದಿಗೆ ಸಮನ್ವಯ ಮೂಡಿಸಿ ಜಾಗೃತಿ ಮೂಡಿಸುವ ಕಾರ್ಯವನ್ನು ಎಲ್ಲರೂ ಜೊತೆ ಸೇರಿ ಮಾಡಬೇಕೆಂದು ಸಂಘದ ಸಂಚಾಲಕರಾದ ಪಿ ಚಂದ್ರ ಶೇಖರ ಸಾಲ್ಯಾನ್ ಕೊಯ್ಯೂರು ರವರು ತಿಳಿಸಿದರು.
ಕಾರ್ಯದರ್ಶಿ ವಿ. ಹರೀಶ್ ನೆರಿಯ ರವರು ಸಂಘದ ನಿಯಮಗಳ ಕುರಿತ ವಿಚಾರಗಳ ಪ್ರಸ್ತಾವಿಸಿ ಸ್ವಾಗತಿಸಿದರು. ಸಭೆಯ ವೇದಿಕೆಯಲ್ಲಿ ಹಿರಿಯ ಭಜನಾ ತರಬೇತಿದಾರರಾದ ಬೊಮ್ಮಯ್ಯ ಬಂಗೇರ ಕರಾಯ, ಸಂಚಾಲಕರಾದ ಪಿ ಚಂದ್ರಶೇಖರ ಸಾಲ್ಯಾನ್ ಕೊಯ್ಯೂರು, ಸಂಘಟನಾ ಕಾರ್ಯದರ್ಶಿ ನಾಗೇಶ್ ನೆರಿಯ, ಕಾರ್ಯದರ್ಶಿ ವಿ ಹರೀಶ್ ನೆರಿಯ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕುಣಿತ ಭಜನಾ ತರಬೇತಿ ನೀಡುತ್ತಿರುವ ಎಲ್ಲ ತರಬೇತಿದಾರರು ಉಪಸ್ಥಿತರಿದ್ದರು. ಸಹ ಸಂಘಟನಾ ಕಾರ್ಯದರ್ಶಿ ಕು. ಸಿಂಧೂ ರವರು ಕಾರ್ಯಕ್ರಮ ನಿರೂಪಿಸಿ, ಜತೆ ಕಾರ್ಯದರ್ಶಿ ಕು. ಮಾನ್ಯರವರು ಪ್ರಾರ್ಥಿಸಿ, ಧನ್ಯವಾದವಿತ್ತರು.