ಬೆಳ್ಯಂಗಡಿ: ಎಸ್.ಡಿ.ಎಮ್. ಪದವಿ ಪೂರ್ವ ಕಾಲೇಜಿನ ರೋವರ್ಸ್-ರೇಂಜರ್ಸ್ ದಳದಿಂದ ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪದವಿ ಪೂರ್ವ ವಾರ್ಷಿಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ರೋವರ್ಸ್ ರೇಂಜರ್ಸ್ ದಳದ ಹಿರಿಯ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಾಣಿ ಪದವಿ ಪೂರ್ವ ಕಾಲೇಜು, ಬೆಳ್ತಂಗಡಿಯ ರೋವರ್ ಸ್ಕೌಟ್ ಲೀಡರ್ ಹಾಗೂ ಕನ್ನಡ ಉಪನ್ಯಾಸಕ ಬೆಳ್ಳಿಯಪ್ಪ ಕೆ ಆಗಮಿಸಿದ್ದರು. ಸಾಧಕರನ್ನು ಸನ್ಮಾನಿಸಿ ಮಾತನಾಡಿದ ಮುಖ್ಯ ಅತಿಥಿಗಳು ರೋವರ್ಸ್ ಮತ್ತು ರೇಂಜರ್ಸ್ ಶಿಕ್ಷಣದಿಂದ ಜೀವನಕ್ಕೆ ಒಂದು ಶಿಸ್ತು ಬದ್ಧ ಚೌಕಟ್ಟು ದೊರೆಯುತ್ತದೆ. ರೋವರ್ಸ್-ರೇಂಜರ್ಸ್ ಚಟುವಟಿಕೆಗಳಿಂದ ಪಠ್ಯ ಶಿಕ್ಷಣಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ ಎಂಬುದಕ್ಕೆ ಈ ಇಬ್ಬರು ಸಾಧಕರೇ ಉದಾಹರಣೆ. ಪಠ್ಯ ಹಾಗೂ ಸಹ ಪಠ್ಯ ಚಟುವಟಿಕೆಗಳೆರಡರಲ್ಲಿಯೂ ಸಹ ಹೇಗೆ ತಮ್ಮನ್ನು ತಾವು ಸಕ್ರೀಯವಾಗಿ ತೊಡಗಿಸಿ ಸಾಧಿಸಿಬಹುದು ಎಂಬುದನ್ನು ಈ ಇರ್ವರೂ ಸಾಧಿಸಿ ತೋರಿಸಿದ್ದಾರೆ. ರೋವರ್ಸ್-ರೇಂಜರ್ಸ್ ಶಿಕ್ಷಣ, ಜೀವನಕ್ಕೆ ಬೇಕಾದ ಎಲ್ಲಾ ರೀತಿಯ ಕೌಶಲ್ಯ ನೀಡುತ್ತದೆ.ಯಾವುದೇ ಪರಿಸ್ಥಿತಿ ಇರಲಿ,ಸನ್ನಿವೇಷ ಹೇಗೆ ಇರಲಿ ನಾವು ಹೇಗೆ ವರ್ತಿಸಬೇಕು, ಹೇಗೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂಬುದು ರೋವರ್ಸ್-ರೇಂಜರ್ಸ್ ಶಿಕ್ಷಣ ಕಲಿಸುತ್ತದೆ. ಆದರೆ ನಾವು ಅದರ ಚಟುವಟಿಕೆಗಳಲ್ಲಿ ನಿರಂತರ ತೊಡಗಿಸಿಕೊಳ್ಳಬೇಕು ಅಂದಾಗ ಮಾತ್ರ ಅದರ ತಿರುಳನ್ನು ನಾವು ಅನುಭವಿಸಬಹುದು ಎಂದು ನುಡಿದು ಶುಭ ಹಾರೈಸಿದರು.
2023-2024 ನೇ ಸಾಲಿನ ದ್ವಿತೀಯ ಪಿಯುಸಿ ಯ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 583 ಅಂಕಗಳಿಸಿ ಬೆಳ್ತಂಗಡಿ ತಾಲೂಕಿಗೇ ಪ್ರಥಮ ಸ್ಥಾನ ಪಡೆದ ಕಾಲೇಜಿನ ರೋವರ್ಸ್ ರೇಂಜರ್ಸ್ ದಳದ ಹಿರಿಯ ವಿದ್ಯಾರ್ಥಿನಿ ಕುಮಾರಿ ಶ್ರೀನಿಧಿ ಬಿ ಎನ್ ಹಾಗೂ ವಾಣಿಜ್ಯ ವಿಭಾಗದಲ್ಲಿ 582 ಅಂಕ ಪಡೆದು ಕಾಲೇಜಿನಲ್ಲಿ ತೃತೀಯ ಸ್ಥಾನ ಪಡೆದ ಕಾಲೇಜಿನ ರೋವರ್ಸ್ ರೇಂಜರ್ಸ್ ದಳದ ಹಿರಿಯ ವಿದ್ಯಾರ್ಥಿ ಕುಮಾರ ಆದಿತ್ಯ ಹೆಗಡೆ ಇವರನ್ನು ಸನ್ಮಾನಿಸಲಾಯಿತು.