ಇಂದಬೆಟ್ಟು: ಇಂದಬೆಟ್ಟು ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಈ ಹಿಂದಿನ ಅವಧಿಯಲ್ಲಿ ವಿವಿಧ ಕಾಮಗಾರಿಯಲ್ಲಿ ದುರುಪಯೋಗವಾಗಿದೆ ಎಂಬ ಆರೋಪದ ದೂರಿನ ಹಿನ್ನಲೆಯಲ್ಲಿ ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳು ಜು.9 ಹಾಗೂ ಜು.10ರಂದು ಎರಡು ದಿನ ಇಂದಬೆಟ್ಟುವಿಗೆ ಆಗಮಿಸಿ ಕಡತ ಪರಿಶೀಲನೆ ಹಾಗೂ ಸ್ಥಳ ತನಿಖೆ ನಡೆಸಿದರು.
ಇಂದಬೆಟ್ಟು ನಿವಾಸಿ ಜಯರಾಮ ಗೌಡ ಅವರು ಇಂದಬೆಟ್ಟು ಗ್ರಾಮ ಪಂಚಾಯತದಲ್ಲಿ 2022-21 ಹಾಗೂ 2021-22ನೇ ಸಾಲಿನಲ್ಲಿ ಚರಂಡಿ, ಆರ್ತ್‌ವರ್ಕ್, ಮೋರಿ, ಸೇತುವೆ ಸೇರಿದಂತೆ ಸುಮಾರು 20 ಕಾಮಗಾರಿಗಳಲ್ಲಿ ದುರುಪಯೋಗವಾಗಿದೆ. ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಿಲ್ಲ, ಕಾಮಗಾರಿ ನಡೆಸದೆ ಬಿಲ್ಲುಗಳನ್ನು ಪಾಸ್ ಮಾಡಲಾಗಿದೆ. ಕಾಮಗಾರಿ ಸೂಚಿಸಿದ ಸ್ಥಳಗಳಲ್ಲಿ ನಡೆಸಿಲ್ಲ ಮೊದಲಾದ ಆರೋಪಗಳನ್ನು ಮಾಡಿ ತನಿಖೆಗೆ ನಡೆಸುವಂತೆ ಲೋಕಾಯುಕ್ತರಿಗೆ ಆಗಿನ ಪಿಡಿಒ ಸವಿತಾ, ಗ್ರಾ.ಪಂ ಅಧ್ಯಕ್ಷ ಅನಂದ ಅಡೀಲು, ಇಂಜಿನಿಯರ್ ಹರ್ಷಿತ್ ವಿರುದ್ಧ 2023 ಜೂನ್ ತಿಂಗಳಲ್ಲಿ ಬೆಂಗಳೂರು ಲೋಕಾಯಯಕ್ತರಿಗೆ ದೂರು ನೀಡಿದ್ದರು. ಅದಕ್ಕೆ ಮೊದಲು ಮಾಜಿ ಶಾಸಕ ವಸಂತ ಬಂಗೇರ ನೇತೃತ್ವದಲ್ಲಿ ಪಂಚಾಯತ್ ಎದುರು ಪ್ರತಿಭಟನೆ ಕೂಡ ನಡೆಸಲಾಗಿತ್ತು.
ಬೆಂಗಳೂರು ಕೇಂದ್ರ ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರು ದೂರು ದಾಖಲಿಸಿಕೊಂಡು ಅಂತರಿಕ ತನಿಖೆ ನಡೆಸುತ್ತಿದ್ದರು. ಇದೀಗ ಜು.9 ರಂದು ಬೆಳಗ್ಗೆ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಇಂಜಿನಿಯರ್ ಪ್ರಕಾಶ್ ಬಣಕಾರ್ ಮತ್ತು ಸಹಾಯಕ ಇಂಜಿನಿಯರ್ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬ್ಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಮತ್ತೆ ಜು.10 ರಂದು ಇಂದಬೆಟ್ಟು ಗ್ರಾಮ ಪಂಚಾಯತ್ ಗೆ ಬಂದು ಸ್ಥಳ ತನಿಖೆ ನಡೆಸಿ ದೂರುದಾರ ಜಯರಾಮ್ ಬಂಗಾಡಿ ಜೊತೆ ದೂರು ನೀಡಿದ ಕಾಮಗಾರಿಗಳ ಪರಿಶೀಲನೆ ನಡೆಸಿ ಮಹಜರ್ ಮಾಡಿದರು.
ಈ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷ ಆನಂದ ಅಡೀಲು, ಈ ಹಿಂದಿನ ಪಿಡಿಒ ಸವಿತಾ ಬಿ.ಸಿ, ಇಂಜಿನಿಯರ್ ಹರ್ಷಿತ್ ಉಪಸ್ಥಿತರಿದ್ದರು.