ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿ ಇವರ ಸಹಯೋಗದೊಂದಿಗೆ ಜು.12 ರಂದು ಎಸ್ ಡಿ ಎಂ ಆಂಗ್ಲ ಮಾಧ್ಯಮ ಸಭಾ ಭವನದಲ್ಲಿ ಬನ್ನಿ ದಳದ ಉದ್ಘಾಟನಾ ಸಮಾರಂಭ ನಡೆಯಿತು.
ಮೂರರ ಬುದ್ಧಿ ನೂರರ ವರೆಗೆ, ವಿದ್ಯಾರ್ಥಿಗಳು ಬಾಲ್ಯದಲ್ಲಿಯೇ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು, ಜೀವನದಲ್ಲಿ ಶಿಸ್ತು, ಪರೋಪಕಾರ, ಸಮಾಜಸೇವೆ, ಹಿರಿಯರನ್ನು ಗೌರವ ಮನೋಭಾವನೆ ಮತ್ತು ಪ್ರೀತಿಯಿಂದ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ, ಶಿಕ್ಷಣದ ಜೊತೆ ಸರ್ವತೋಮುಖ ವ್ಯಕ್ತಿತ್ವ ವಿಕಸನಕ್ಕೆ ಸ್ಕೌಟ್ ಗೈಡ್ಸ್ ಸಂಸ್ಥೆಯ ಕೊಡುಗೆ ಅಪಾರವಾದುದು ಎಂದು ತಿಳಿಸಿ ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲೆ ಬೆಳ್ತಂಗಡಿಯಲ್ಲಿ ಬನ್ನಿಸ್ ವಿಭಾಗವನ್ನು ಜ್ಯೋತಿ ಪ್ರಜ್ವಲಿಸಿ ಉದ್ಘಾಟಿಸಿ ಶ್ರೀಮತಿ ಡಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಜಿಲ್ಲಾ ಸಹಾಯಕ ಆಯುಕ್ತ ಬಿ ಸೋಮಶೇಖರ ಶೆಟ್ಟಿ ಮಾತಾಡಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣದ ಜೊತೆ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡುವುದರ ಜೊತೆಗೆ, ವಿದ್ಯಾರ್ಥಿಗಳಲ್ಲಿ ಜೀವನ ಮೌಲ್ಯ ಹಾಗೂ ಆತ್ಮವಿಶ್ವಾಸ ಮೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರುವುದಕ್ಕೆ ಅಭಿನಂದಿಸಿದರು. ಜಿಲ್ಲಾ ಸಹಾಯಕ ಆಯುಕ್ತ ವಿಠಲ್ ಶೆಟ್ಟಿ ಸ್ಕೌಟ್ ಗೈಡ್ಸ್ ಸಂಸ್ಥೆಯ ಚಟುವಟಿಕೆ, ಬೆಳೆದು ಬಂದ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಶ್ರೀಮತಿ ಉಮರಾವ್, ಎಸ್ ಡಿ ಎಂ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಹೇಮಲತಾ ಎಂ ಆರ್, ರಾಜ್ಯ ಸಂಘಟನಾ ಆಯುಕ್ತ ಭರತ್ ರಾಜ್ ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಾಜ್ಯ ಸಂಸ್ಥೆಯ 2024-25 ನೇ ಸಾಲಿನ ಯೋಜನ ಪುಸ್ತಕವನ್ನು ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳು ಶ್ರೀಮತಿ ಡಿ ಸುಪ್ರಿಯಾ ಹರ್ಷೇಂದ್ರ ಕುಮಾರ್ ರವರಿಗೆ ಹಸ್ತಾಂತರ ಮಾಡಲಾಯಿತು ಹಾಗೂ ಬನ್ನಿ ಮಕ್ಕಳಿಗೆ ಬನ್ನಿ ಸಮವಸ್ತ್ರವನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಕ ಶ್ರೇಯಾಂಸ ಜೈನ್ ಸ್ವಾಗತಿಸಿ, ರಾಜ್ಯ ಸಹಾಯಕ ಸಂಘಟನಾ ಆಯುಕ್ತ ಭರತ್ ರಾಜ್ ಕೆ ನಿರೂಪಿಸಿ, ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ ಧನ್ಯವಾದವಿತ್ತರು.