ಬೆಳ್ತಂಗಡಿ: ಪ್ರವಾಸಕ್ಕೆ ಬಂದು ಹಳ್ಳಿ ರಸ್ತೆಯಲ್ಲಿ ವೀಲಿಂಗ್ ಮಾಡಿ ಸುಮಾರು ಐದು ಕಿಲೋ ಮೀಟರ್ ರಸ್ತೆಯನ್ನು ಹಾಳು ಮಾಡಿರುವ ಬೆಳ್ತಂಗಡಿಯ ಉಜಿರೆ ಮೂಲದ ಐವರು ಯುವಕರ ವಿರುದ್ದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ನಿವಾಸಿಗಳಾದ ಗಿರೀಶ್, ಗಣೇಶ್, ಗಣೇಶ್ ಕುಮಾರ್, ಪ್ರವೀಣ್ ಹಾಗೂ ರೋಹಿತ್ ಬಂಧಿತ ಆರೋಪಿಗಳು. ರಸ್ತೆಯಲ್ಲಿ ವೀಲಿಂಗ್ ಮಾಡಿದ್ದ 5 ಬೈಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ಕಶ ಶಬ್ದದೊಂದಿಗೆ ಓಡಾಟ ಹಾಗೂ ಸಾರ್ವಜನಿಕ ರಸ್ತೆಯನ್ನು ಹಾಳು ಮಾಡಿದ ಹಿನ್ನೆಲೆ ಐವರ ವಿರುದ್ಧವು ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಾರಾಂತ್ಯದ ಹಿನ್ನೆಲೆ ಜು.14ರಂದು ಮೂಡಿಗೆರೆ ತಾಲೂಕಿನ ಸುಪ್ರಸಿದ್ದ ಪ್ರವಾಸಿತಾಣ ರಾಣಿ ಝರಿ ಜಲಪಾತಕ್ಕೆ ಬಂದಿದ್ದ ಐವರು ಸ್ನೇಹಿತರು ರೀಲ್ಸ್ ಮಾಡುವ ಹುಚ್ಚಿಗೆ ಹಳ್ಳಿಯ ರಸ್ತೆಯನ್ನು ಸಂಪೂರ್ಣ ಹಾಳು ಮಾಡಿದ್ದರು. ಇದರಿಂದ ರಾಣಿಝರಿಯ ಮಣ್ಣಿನ ರಸ್ತೆ ಕೆಸರು ಗದ್ದೆಯಾಗಿತ್ತು., ಅರ್ಧಗಂಟೆಗೂ ಹೆಚ್ಚು ಕಾಲ ಯುವಕರು ಹುಚ್ಚಾಟ ನಡೆಸಿದರೂ ಸಹ ಹೇಳೋರಿಲ್ಲ, ಕೇಳೋರಿಲ್ಲ ಎಂಬಾಂತಾಗಿತ್ತು.