ಉಜಿರೆ: ಇಲ್ಲಿನ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯಲ್ಲಿ ತುಳು ಸಂಸ್ಕೃತಿ ಪರಿಚಯಿಸುವ ‘ಆಟಿಡೊಂಜಿ ದಿನ’ ಕಾರ್ಯಕ್ರಮ ಆ.14ರಂದು ನಡೆಯಿತು.
ಮುಖ್ಯ ಅತಿಥಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದೈವನರ್ತಕ ಮತ್ತು ಸಿವಿಲ್ ಇಂಜಿನಿಯರಿಂಗ್ ಉಪನ್ಯಾಸಕ ಡಾ. ರವೀಶ್ ಪಡುಮಲೆ ಅವರು ಕಾರ್ಯಕ್ರಮ ಉದ್ಘಾಟಿಸಿದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಆಟಿ ತಿಂಗಳ ದಿನಗಳ ಬಗ್ಗೆ ತಿಳಿಸಿದರು. ಹಿರಿಯರು ಬೇಸಾಯ ಮಾಡುತ್ತಿದ್ದ ಕಾಲವನ್ನು ನೆನಪಿಸಿದರು. ತುಳುನಾಡ ಕ್ಯಾಲೆಂಡರ್’ನ ಸೊಗಡು, ಆಟಿ ಕಳಂಜದ ವೈಶಿಷ್ಟ್ಯ, ದೈವ- ದೇವರುಗಳ ಕೆಲಸ ಕಾರ್ಯವನ್ನು ವಿವರಿಸಿದರು. ಆಟಿಯ ಕುರಿತಾದ ಹಾಡುಗಳನ್ನು ಹಾಡಿ ಸಾಂಪ್ರದಾಯಿಕ ತುಳು ಹಾಡುಗಳ ವೈಶಿಷ್ಟ್ಯವನ್ನು ವಿವರಿಸಿದರು.
ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮಿ ನಾಯಕ್, ಆಟಿ ತಿಂಗಳ ಬಗೆಗಿನ ಅರಿವಿನ ಅಗತ್ಯದ ಬಗ್ಗೆ ತಿಳಿಸಿದರು.
ಮನಸ್ವಿ ಅತಿಥಿ ಪರಿಚಯ ನೀಡಿದರು. ಜ್ಞಾನ್ ಅನ್ವೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ದೀಕ್ಷಾ ಸ್ವಾಗತಿಸಿ, ಅದೀಶ್ ವಂದಿಸಿ, ಮಧುಶ್ರೀ ನಿರೂಪಿಸಿದರು.
ಅತಿಥಿಗಳನ್ನು ಚೆಂಡೆ ವಾದನದೊಂದಿಗೆ ಸ್ವಾಗತಿಸಿ, ವೀಳ್ಯದೆಲೆ ಅಡಿಕೆ ನೀಡಿ, ವೇದಿಕೆಗೆ ಬರಮಾಡಿಕೊಂಡದ್ದು ವಿಶೇಷವಾಗಿತ್ತು. ವಿದ್ಯಾರ್ಥಿಗಳು ತುಳು ಹಾಡು, ತುಳು ಗಾದೆಮಾತುಗಳು, ಒಗಟುಗಳು ಮತ್ತು ನೃತ್ಯ ಪ್ರಸ್ತುತಪಡಿಸಿದರು.
ಆಟಿ ತಿಂಗಳ ವಿಶೇಷ ಖಾದ್ಯಗಳ ಪರಿಚಯವನ್ನು ನೀಡಿ ಸವಿಯಲಾಯಿತು. ಹಾಗೂ ಹಳೆಯ ಕಾಲದ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.