ತೆಂಕಕಾರಂದೂರು: ವಾದ್ಯ, ನಾಟ್ಯ, ಭಜನೆಯಂತಹ ಯಾವುದೇ ಕಲೆಯು ಸಿದ್ಧಿಸಬೇಕಾದರೆ ಶಾಸ್ತ್ರೀಯ ಸಂಗೀತವೇ ಅಡಿಪಾಯ ಎಂದು ಭರತನಾಟ್ಯ ವಿದುಷಿ ಶ್ರೀಮತಿ ನಿಶಾಪ್ರಸಾದ್ ಹೇಳಿದರು.
ಅವರು ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಭಾಂಗಣದಲ್ಲಿ ಶ್ರೀರಾಗ ಸಂಗೀತ ಶಾಲೆ ಉದ್ಘಾಟಿಸಿ ಮಾತನಾಡಿದರು. ಸಂಗೀತ ಮತ್ತು ಭರತನಾಟ್ಯಗಳೆರಡೂ ಒಂದೇ ಗಾಡಿಯ ಎರಡು ಚಕ್ರಗಳಿದ್ದಂತೆ. ಸಂಗೀತವು ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದರ ಜೊತೆಗೆ ರಾಗಬದ್ಧವಾಗಿ ಹಾಡುವುದರಿಂದ ಭಗವಂತನ ಸ್ತುತಿ ಮಾಡಿ ನೆಮ್ಮದಿಯನ್ನು ಕಂಡುಕೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಶ್ರೀಮತಿ ಉಮಾ ಶಂಕರನಾರಾಯಣ ಉಪಾಧ್ಯಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಗ ಸಂಗೀತ ಶಾಲೆಯ ಶಿಕ್ಷಕಿ ಶ್ರೀಮತಿ ಶ್ರೀಪ್ರಿಯಾ ಪರಕ್ಕಜೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ದೇವಸ್ಥಾನದ ಆಡಳಿತ ಮಂಡಳಿಯ ಸಹಕಾರದೊಂದಿಗೆ ಪ್ರತಿ ಭಾನುವಾರ ಈ ತರಬೇತಿಯು ಮುಂದುವರೆಯುವುದಾಗಿ ತಿಳಿಸಿದರು.
ರವಿ ಪರಕ್ಕಜೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ತರಬೇತಿ ನಡೆಯಿತು.