ಪತ್ರಿಕಾಗೋಷ್ಠಿ
ಬೆಳ್ತಂಗಡಿ: ವಿಶ್ವಹಿಂದೂ ಪರಿಷದ್ ಸ್ಥಾಪನಾ ದಿನ ಹಾಗೂ ಷಷ್ಠಿಪೂರ್ತಿ ಸಮಾರೋಪ ಸಂಭ್ರಮದ ಪ್ರಯುಕ್ತ ವಿ
ಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ ಇದರ ನೇತೃತ್ವದಲ್ಲಿ ಬೃಹತ್ ಶೋಭಾಯಾತ್ರೆಯೊಂದಿಗೆ ಹಿಂದೂ ಸಮಾವೇಶ ಸೆ.೧ರಂದು ಉಜಿರೆಯಲ್ಲಿ ನಡೆಯಲಿದೆ ಎಂದು ವಿಶ್ವಹಿಂದೂ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪುವೆಲ್ ಹೇಳಿದರು.
ಅವರು ಆ.22 ರಂದು ಉಜಿರೆಯ ಶಾರದಾ ಮಂಟಪದಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ನಂತರ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. 1964 ಅ.29ರಂದು ಆರಂಭಗೊಂಡ ವಿಶ್ವಹಿಂದೂ ಪರಿಷದ್ ಜತ್ತಿನ ಅತೀ ದೊಡ್ಡ ಹಿಂದೂ ಸಂಘಟನೆಯಾಗಿದೆ. ಸ್ವಾಮಿ ಚಿನ್ಮಯಾನಂದ ಸ್ವಾಮೀಜಿಯವರು ನೇತೃತ್ವದಲ್ಲಿ ಇದನ್ನು ಸ್ಥಾಪನೆ ಮಾಡಲಾಯಿತು. ಇಂದು ಭಾರತ ಮಾತ್ರವಲ್ಲದೆ, ಅಮೇರಿಕಾ, ಜರ್ಮನಿ, ಕೆನಡ, ಶ್ರೀಲಂಕಾ, ಇಂಡೋನೇಷ್ಯಾ, ಮೆಲೇಶಿಯಾ ಸೇರಿದಂತೆ ಜಗತ್ತಿನ 30 ದೇಶಗಳಲ್ಲಿ ವಿ.ಹಿಂ.ಪ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ 90 ಸಾವಿರ ಗ್ರಾಮ ಸಮಿತಿಗಳಿದ್ದು, ಸೇವಾ, ಸುರಕ್ಷಾ ಮತ್ತು ಸಂಸ್ಕಾರ ಈ ಮೂರು ಉದ್ದೇಶಗಳನ್ನು ಇಟ್ಟುಕೊಂಡ ಕಳೆದ 59 ವರ್ಷಗಳಿಂದ ವಿ.ಹಿಂ.ಪ ಕಾರ್ಯನಿರ್ವಹಿಸುತ್ತಿದೆ. ಈ ವರ್ಷ 60 ವರ್ಷ ತುಂಬುತ್ತಿದೆ ಎಂದು ವಿವರಿಸಿದರು.
ವಿಶ್ವಹಿಂದೂ ಪರಿಷದ್‌ಗೆ 60 ವರ್ಷ ತುಂಬುವ ಹಿನ್ನಲೆಯಲ್ಲಿ ಇಡೀ ದೇಶದಲ್ಲಿ ಸಂಭ್ರಚಾರಣೆ ನಡೆಯಲಿದೆ. ದಕ್ಷಿಣ ಪ್ರಾಂತ್ಯದಲ್ಲಿ ೨೫೦ಕ್ಕೂ ಹೆಚ್ಚು ಪ್ರಖಂಡಗಳಲ್ಲಿ ಮತ್ತು ದ.ಕ ಉಡುಪಿಯಲ್ಲಿ 30ಕ್ಕೂ ಹೆಚ್ಚು ಪ್ರಖಂಡಗಳಲ್ಲಿ ಆ.೨೫ರಿಂದ ಸೆ.೧ರ ತನಕ ಷಷ್ಠಿಪೂರ್ತಿ ಸಮಾರಂಭ ಆಯೋಜಿಸಲಾಗಿದೆ. ಬೆಳ್ತಂಗಡಿ ಪ್ರಖಂಡದಲ್ಲಿಯೂ ಈ ಕಾರ್ಯಕ್ರಮ ಸೆ.೧ರಂದು ನಡೆಯಲಿದೆ. ಹಿಂದೂ ಧರ್ಮ, ಸಂಸ್ಕೃತಿಯ ರಕ್ಷಣೆಯ ಜೊತೆ ಸನಾತನ ಧರ್ಮದ ಪ್ರಚಾರ ಕಾರ್ಯವನ್ನು ಮಾಡಲಾಗುವುದು. ಹಿಂದೂ ಸಮಾವೇಶ ಜೊತೆಗೆ ಶೋಭಾ ಯಾತ್ರೆ ಆ ದಿನ ನಡೆಯಲಿದೆ. ದೇಶದಲ್ಲಿ ಸಾಮಾರಸ್ಯ, ಸಮಾನತೆ, ಪರಿಸರ ಸಂರಕ್ಷಣೆ ಮತ್ತು ಆರೋಗ್ಯ ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣ ಮೂಲಕ ಸಮಾಜದಲ್ಲಿ ಪರಿವರ್ತನೆ ತರುವುದು ಸಮ್ಮೇಳನದ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷದ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ ಅವರು ಸೆ.೧ರಂದು ನಡೆಯಲಿರುವ ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿ, ಉಜಿರೆ ಎಸ್.ಡಿ.ಎಂ ಕಾಲೇಜು ಬಳಿಯಲ್ಲಿ ಬೃಹತ್ ಶೋಭಾಯಾತ್ರೆ ಶಾರದ ಮಂಟಪ ತನಕ ನಡೆಯಲಿದ್ದು, ಶೋಭಾ ಯಾತ್ರೆಗೆ ಹಿರಿಯ ಕಾರ್ಯಕರ್ತ ಮೋಹನ್ ರಾವ್ ಕಲ್ಮಂಜ ಚಾಲನೆ ನೀಡಲಿದ್ದಾರೆ. ಮಂಡಲ ವ್ಯಾಪ್ತಿಯ ೪೦ ಗ್ರಾಮಗಳಿಂದ ಸುಮಾರು ೨೫೦೦ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಎಲ್ಲಾ ಸಂಘಟನೆಗಳ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ವಿ.ಹಿಂ.ಪ ಷಷ್ಠಿಪೂರ್ತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಂ.ಎಂ. ದಯಾಕರ್ ಅವರ ಅಧ್ಯಕ್ಷತೆಯಲ್ಲಿ ಉಜಿರೆ ದೇಶವಸ್ಥಾನದ ಅನುವಂಶಿಕ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ ಉದ್ಘಾಟಿಸಲಿದ್ದು, ವಿ.ಹಿ.ಪಂ. ದಕ್ಷಿಣ ಪ್ರಾಂತ ಉಪಾಧ್ಯಕ್ಷ ಟಿ.ಎ.ಪಿ ಶೆಣೈ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ೬೦ ಮಂದಿಯನ್ನು ಗುರುತಿಸುವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿ.ಹಿಂ.ಪ ಷಷ್ಠಿಪೂರ್ತಿ ಉತ್ಸವ ಸಮಿತಿ ಅಧ್ಯಕ್ಷ ಡಾ. ಎಂ.ಎಂ ದಯಾಕರ್, ಸಂಚಾಲಕ ಸಂಪತ್ ಬಿ. ಸವರ್ಣ, ವಿ.ಹಿಂ.ಪ ಬೆಳ್ತಂಗಡಿ ಪ್ರಖಂಡದ ಅಧ್ಯಕ್ಷ ದಿನೇಶ್ ಚಾರ್ಮಾಡಿ, ಕಾರ್ಯದರ್ಶಿ ಮೋಹನ್ ಬೆಳ್ತಂಗಡಿ, ಭಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನಿತ್ ಅತ್ತಾವರ ಉಪಸ್ಥಿತರಿದ್ದರು.