ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಮಿಂಚುತ್ತಿರುವ ಬಾರ್ಯದ ಕಲ್ಲಾಜೆಯ ನಿವಾಸಿ ಯುವ ಸಂಗೀತ ನಿರ್ದೇಶಕ ಪ್ರಸಾದ್ ಕೆ ಶೆಟ್ಟಿ

Suddi Udaya

ಬೆಳ್ತಂಗಡಿ: ಸಿನಿಮಾ ರಂಗದ ಸಂಗೀತ ಕ್ಷೇತ್ರದಲ್ಲಿ ಬೆಳ್ತಂಗಡಿಯ ಯುವ ಸಂಗೀತ ನಿರ್ದೇಶಕರೊಬ್ಬರು ಸದ್ದಿಲ್ಲದೇ ಮಿಂಚುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಕಲ್ಲಾಜೆಯ ನಿವಾಸಿ ಪ್ರಸಾದ್ ಕೆ ಶೆಟ್ಟಿ ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದ ಇವರು ವಿಜ್ಞಾನ ವಿಭಾಗದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದಿದ್ದರೂ, ಸಂದೇಶ ಲಲಿತ ಕಲಾ ಕಾಲೇಜು ಮಂಗಳೂರಿನಲ್ಲಿ ವೆಸ್ಟರ್ನ್ ಹಾಗೂ ಇಂಡಿಯನ್ ಕ್ಲಾಸಿಕಲ್ ಮ್ಯೂಸಿಕ್ ನಲ್ಲಿ ಪದವಿಯನ್ನು ಮಾಡಿದ್ದಾರೆ. ಹೆಚ್ಚುವರಿ ಸಂಗೀತ ಶಿಕ್ಷಣಕ್ಕಾಗಿ ಚೆನ್ನೈನಲ್ಲಿ ಮ್ಯೂಸಿಕ್ ಪ್ರೊಡಕ್ಷನ್ ಮತ್ತು ಸೌಂಡ್‌ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿರುವ ಇವರು ಹೆಸರಾಂತ ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ, ಅವರ ಸಹಾಯಕರಾಗಿ 2 ವರ್ಷಗಳ ಸಂಗೀತ ನಿರ್ದೇಶನವನ್ನು ಮಾಡಿರುತ್ತಾರೆ.

ಕನ್ನಡ ಸಿನಿಮಾಗಳಾದ ಗಂಧದ ಕುಡಿ, ಲುಂಗಿ, ನಾನು ಅದು ಮತ್ತು ಸರೋಜಾ, ದಿಲ್ ಖುಷ್ ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನೇನು ತೆರೆ ಕಾಣಲಿರುವ ನಿಮ್ಮ ‘ವಸ್ತುಗಳಿಗೆ ನೀವೇ ಜವಾಬ್ದಾರಿ’, ಪಾರಿನ್ ಸ್ಕಾಚ್, ರಕ್ಷಿತ್ ಶೆಟ್ಟಿ ನಿರ್ಮಾನದ ಸ್ಟ್ರಾಬೆರ್ರಿ ಹಾಗೂ ಸುಮನ್ ಸುವರ್ಣ ನಿರ್ದೇಶನದ, ಅರ್ಜುನ್ ಕಾಪಿಕಾಡ್ ಅಭಿನಯದ ಇದೇ ಸೆ.13ರಂದು ತೆರೆಕಾಣಲಿರುವ ಕಲ್ಜಿಗ, ಕನ್ನಡ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿ ಸಿನಿಮಾ ತಂಡದಿಂದ ಹಾಗೂ ಜನರಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅರ್ಜುನ್ ಲೂಯಿಸ್ ನಿರ್ದೇಶನದ ಪರ್ಸೆಕ್ಟಿವ್ ಎಂಬ ಕಿರುಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿರುವ ಪ್ರಸಾದ್‌ ಕೆ ಶೆಟ್ಟಿ ಅವರು ಆ.31ರಂದು ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ನರ್ ಸೀಟ್ ಇಂಟರ್ನಾಷನಲ್ ಫಿಲಂ ಫೆಸ್ಟಿವಲ್‌ನಲ್ಲಿ ತಮಿಳು ಚಿತ್ರರಂಗದ ಗಣ್ಯರಿಂದ ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿ ಸ್ವೀಕರಿಸಿದರು.

Leave a Comment

error: Content is protected !!