ಕುತ್ಲೂರು: ಕಾಲೇಜಿಗೆ ಹೋಗಿ ಹಿಂತಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ರಸ್ತೆಯ ನಿರ್ಜನ ಪ್ರದೇಶದಲ್ಲಿ ತಡೆದು ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿ ಮಾನಹಾನಿ ಮಾಡಿ, ಕೊಲೆ ಬೆದರಿಕೆ ಹಾಕಿರುವ ಆರೋಪದಲ್ಲಿ ವಿದ್ಯಾರ್ಥಿನಿ ನೀಡಿದ ದೂರಿನಂತೆ ವ್ಯಕ್ತಿಯೋರ್ವನ ಮೇಲೆ ಸೆ.13 ರಂದು ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುತ್ಲೂರು ಗ್ರಾಮದ ಮಂಜುಶ್ರೀ ನಗರ ನಿವಾಸಿ ಶಂಕರ ದೇವಾಡಿಗ ಹಲ್ಲೆ ನಡೆಸಿದ ಆರೋಪಿಯಾಗಿದ್ದು, ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು , ಆರೋಪಿಸಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿತ ಶಂಕರ್ ದೇವಾಡಿಗ ಬಾಲ್ಯದಿಂದಲೇ ವಿದ್ಯಾರ್ಥಿನಿಯ ಪರಿಚಯನಾಗಿದ್ದು, ಇತ್ತೀಚೆಗೆ ಪೋನಿನಲ್ಲಿ ಸಲುಗೆಯಿಂದ ಮಾತನಾಡಿಕೊಂಡು ಪರಸ್ಪರ ಚಾಟಿಂಗ್ ನಡೆಸಿ, ಅನ್ಯೋನ್ಯವಾಗಿದ್ದರು. ಈ ವಿಷಯ ವಿದ್ಯಾರ್ಥಿನಿಯ ತಂದೆ ತಾಯಿಗೆ ಗೊತ್ತಾಗಿ, ತಾಯಿ ಆತನೊಡನೆ ಮಾತನಾಡದಂತೆ, ತಾಕೀತು ಮಾಡಿದ್ದರು.
ಕಳೆದ 3 ದಿನದ ಹಿಂದೆ ವಿದ್ಯಾರ್ಥಿನಿ ಆತನ ನಂಬ್ರವನ್ನು ಬ್ಲಾಕ್ ಮಾಡಿದ್ದಳು. ಇದರಿಂದ ದ್ವೇಷಗೊಂಡ ಆತ ಸೆ. 12 ರಂದು ವಿದ್ಯಾರ್ಥಿನಿ ಕಾಲೇಜಿಗೆ ಹೋಗಿ ಸಂಜೆ ಬಸ್ಸಿನಿಂದ ಇಳಿದು ಮನೆಗೆ ಒಬ್ಬಳೇ ನಡೆದುಕೊಂಡು ಬರುವ ಸಮಯ ಕುತ್ಲೂರು ಗ್ರಾಮದ ಬನಶ್ರೀನಗರ ಎಂಬಲ್ಲಿ ನಿರ್ಜನ ಪ್ರದೇಶದಲ್ಲಿ ಆರೋಪಿ, ವಿದ್ಯಾರ್ಥಿನಿಯನ್ನು ತಡೆದು ನಿಲ್ಲಿಸಿ ಮೊಬೈಲನ್ನು ಪಡೆದುಕೊಂಡು ಪರಿಶೀಲಿಸಿ, ನೀನು ಯಾಕೆ ನನ್ನ ಪೋನು ನಂಬ್ರವನ್ನು ಬ್ಲಾಕ್ ಮಾಡಿದ್ದೀಯಾ, ಎಂದು ವಿಚಾರಿಸಿ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹಲ್ಲೆ ನಡೆಸಿದಲ್ಲದೆ ಕಾಲಿನಿಂದ ಹೊಟ್ಟೆಗೆ ತುಳಿದು, ವಿದ್ಯಾರ್ಥಿನಿಯ ಬಟ್ಟೆ ಹರಿದು ಹಾಕಿ, ಮಾನಕ್ಕೆ ಕುಂದುಂಟು ಮಾಡಿದ್ದ ಎಂದು ವಿದ್ಯಾರ್ಥಿನಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾಳೆ.
ಈ ಸಂದರ್ಭ ನೆರೆಕರೆಯವರು ಬರುವುದನ್ನು ಕಂಡು ಅರೋಪಿ ವಿದ್ಯಾರ್ಥಿನಿಗೆ ಮೊಬೈಲ್ ನೀಡಿ, ಜೀವ ಬೆದರಿಕೆ ಹಾಕಿ ಸ್ಥಳದಿಂದ ಹೋಗಿದ್ದು, ಹಲ್ಲೆಗೊಳಗಾಗಿ ಗಾಯಗೊಂಡ ವಿದ್ಯಾರ್ಥಿನಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಈ ದೂರನ್ನು ನೀಡಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.