ಉಜಿರೆ: ಸಾರ್ಥಕ ಸುವರ್ಣ ಸಂಭ್ರಮವನ್ನು ಆಚರಿಸಿರುವ ಉಜಿರೆ ಶ್ರೀ ಧ.ಮಂ. ಕಾಲೇಜಿನ ಹೆಮ್ಮೆಯ ವಿಭಾಗಗಳಲ್ಲೊಂದಾದ ಎನ್.ಎಸ್.ಎಸ್. ಘಟಕವು ಇದೇ ಬರುವ ಅಕ್ಟೋಬರ್ 5 ಶನಿವಾರ ದಂದು ಎನ್.ಎಸ್.ಎಸ್. ಘಟಕದ ಸುವರ್ಣ ಮಹೋತ್ಸವದ ಅಂಗವಾಗಿ ಹಿರಿಯ ಸ್ವಯಂಸೇವಕರ ಒಗ್ಗೂಡುವಿಕೆಯಲ್ಲಿ ‘ ಸುವರ್ಣ ಸಮ್ಮಿಲನ ‘-ಇದು ಸುವರ್ಣ ಹೆಜ್ಜೆಗಳ ಅವಲೋಕನ ಎಂಬ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಪ್ರಾಂಶುಪಾಲ ಡಾ .ಬಿ.ಎ.ಕುಮಾರ ಹೆಗ್ಡೆ ಅವರು ಹೇಳಿದರು.
ಅವರು ಸೆ. 25ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ಪ್ರಕಟಿಸಿದರು.
ಡಾ.ಹೆಗ್ಗಡೆ ಉದ್ಘಾಟನೆ:
ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿರುವ ಈ ಒಂದು ದಿನದ ಈ ಸಮ್ಮೇಳನದಲ್ಲಿ ಸುಮಾರು 800 ಮಂದಿ ಎನ್.ಎಸ್.ಎಸ್. ಹಿರಿಯ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಸಮ್ಮೇಳನವನ್ನು ಬೆಳಿಗ್ಗೆ 10 ಗಂಟೆಗೆ ಧರ್ಮಸ್ಥಳದ ಧರ್ಮಾಧಿಕಾರಿ, ಎಸ್.ಡಿ.ಎಂ. ಶಿಕ್ಷಣಸಂಸ್ಥೆಗಳ ಅಧ್ಯಕ್ಷರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಲಿರುವರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯದ ಎನ್.ಎಸ್.ಎಸ್.ಯುವ ಸಬಲೀಕರಣ ಮತ್ತು ಕ್ರೀಡಾ ವಿಭಾಗದ ಅಧಿಕಾರಿ ಡಾ. ಪ್ರತಾಪ್ ಲಿಂಗಯ್ಯ, ಮಂಗಳೂರು ವಿ.ವಿ. ಎನ್.ಎಸ್.ಎಸ್. ಸಂಯೋಜನಾಧಿಕಾರಿ ಡಾ. ಶೇಷಪ್ಪ ಅಮೀನ್ ಹಾಗೂ ಶ್ರೀ ಧ.ಮಂ. ಶಿಕ್ಷಣಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮುಖ್ಯ ಅತಿಥಿಗಳಾ ಪಾಲ್ಗೊಳ್ಳುವರು.ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ.ಎ.ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.
ಇಬ್ಬರು ಸಾಧಕರಿಗೆ ಸುವರ್ಣ ಸೇವಾ ರತ್ನ” ಪ್ರಶಸ್ತಿ ಗೌರವ:
ಸುವರ್ಣ ಸಮ್ಮಿಲನದ ಅಂಗವಾಗಿ ಸಮಾಜಸೇವೆಯಲ್ಲಿ ಗುರುತಿಸಿಕೊಂಡಿರುವ ಉಡುಪಿಯ ರವಿ ಕಟಪಾಡಿ ಹಾಗೂ ಉಜಿರೆಯ ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಮೋಹನ್ ಕುಮಾರ್ ಇವರಿಗೆ ‘ಸುವರ್ಣ ಸೇವಾ ರತ್ನ” ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರ,ರಾಜ್ಯ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಯೋಜನಾಧಿಕಾರಿಗಳು ಹಾಗೂ ಸ್ವಯಂ ಸೇವಕರಿಗೆ ಸನ್ಮಾನ, ಹಿರಿಯ ಸ್ವಯಂ ಸೇವಕರೊಂದಿಗೆ ಸಂವಾದ ಕಾರ್ಯಕ್ರಮ, ಕಾಲೇಜಿನ ಕಲಾವೈಭವ ಹಾಗೂ ಹಿರಿಯ ಮ ತ್ತು ಸ್ವಯಂ ಸೇವಕರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಾತ್ರಿ ಶಿಬಿರ ಜ್ಯೋತಿ ನಡೆಯಲಿದೆ ಎಂದು ವಿವರಿಸಿದರು.
ಸೇವಾ ಪಥ’ ಸ್ಮರಣ ಸಂಚಿಕೆ ಅನಾವರಣ: ಸಾಕ್ಷ್ಯ ಚಿತ್ರಗಳ ಪ್ರದರ್ಶನ
ಎನ್.ಎಸ್.ಎಸ್ ಘಟಕಕ್ಕೆ ಅರ್ಹವಾಗಿಯೇ ದೊರಕಿರುವ ಪ್ರಶಸ್ತಿ ಪುರಸ್ಕಾರಗಳು ಮತ್ತು ಪೂರಕ ಮಾಹಿತಿಗಳ ಪ್ರದರ್ಶನ ಮೊದಲಾದ ಅರ್ಥಪೂರ್ಣ ಕಾರ್ಯಕ್ರಮಗಳು ನಡೆಯಲಿದೆ. ಸಾರ್ಥಕ 50 ವರ್ಷಗಳ ಸವಿ ನೆನಪಿಗಾಗಿ ಸಂಸ್ಥೆಯ ಮುಖ್ಯಸ್ಥರು
ಕಾರ್ಯಕ್ರಮದ ಅತಿಥಿ ಅಭ್ಯಾಗತರು, ಹಿರಿಯ ಯೋಜನಾಧಿಕಾರಿಗಳು, ಸ್ವಯಂಸೇವಕರುಗಳು ಇವರುಗಳ ಸಂದೇಶ, ಆಹ್ವಾನಿತ ಲೇಖನ, 50 ವರ್ಷಗಳ ಹಿಂದೆ ಕೊಂಡೊಯ್ಯುವ ಅನುಭವ ಸಿಂಚನ, ಇವುಗಳನ್ನು ಒಳಗೊಂಡ ‘ಸೇವಾ ಪಥ’ ಎಂಬ ಶೀರ್ಷಿಕೆಯ ಸ್ಮರಣ ಸಂಚಿಕೆ ಅನಾವರಣಗೊಳ್ಳಲಿದೆ. ಮತ್ತು ಎಸ್.ಡಿ.ಎಂ. ಎನ್.ಎಸ್.ಎಸ್ ಘಟಕ ನಡೆದು ಬಂದ 50 ವರ್ಷಗಳ ಹಾದಿಯನ್ನು ನೆನೆಯುವ ಸಾಕ್ಷ್ಯ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದರು.
50 ಗಿಡಗಳನ್ನು ನೆಡುವ ಕಾರ್ಯಕ್ರಮ:
ಬೆಳಿಗ್ಗೆ ಸಭಾಕಾರ್ಯಕ್ರಮಕ್ಕೂ ಮುನ್ನ ಕಾಲೇಜಿನ ಒಳಾಂಗಣದಲ್ಲಿ ಸುವರ್ಣ ಸಂಭ್ರಮದ ನೆನಪಿಗಾಗಿ 50 ಗಿಡಗಳನ್ನು ನೆಡುವ ಕಾರ್ಯಕ್ರಮವು ಹಿರಿಯ ಯೋಜನಾಧಿಕಾರಿಗಳು ಮತ್ತು ಸ್ವಯಂಸೇವಕರಿಂದ ನಡೆಯಲಿದೆ. 1972ರಿಂದ ಪೂರ್ಣಕಾಲಿಕವಾಗಿ ಕನ್ನಡ ವಿಭಾಗದ ಪ್ರೊ.ಎನ್.ಜಿ.ಪಟವರ್ಧನ್ ಅವರ ಆದಿಯಾಗಿ ಆರಂಭಗೊಂಡು ಇಂದಿನ ಪ್ರಸಕ್ತ ಯೋಜನಾಧಿಕಾರಿಗಳನ್ನು ಒಳಗೊಂಡಂತೆ 24 ಯೋಜನಾಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಹಾಗೂ ಪ್ರೊ.ದೀಪಾ ಆರ್.ಪಿ. ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತೀವರ್ಷ ತಲಾ 2 ಘಟಕದಡಿಯಲ್ಲಿ 200 ವಿದ್ಯಾರ್ಥಿಗಳಿಗೆ ಸ್ವಯಂಸೇವಕರಾಗುವ ಅವಕಾಶಗಳನ್ನು ಕಲ್ಪಿಸಿಕೊಡಲಾಗಿದೆ ಎಂದರು.
ದೇಶ ವಿದೇಶದಲ್ಲಿ ಅತ್ಯುತ್ತಮ ಹುದ್ದೆಯಲ್ಲಿರುವ ಸ್ವಯಂ ಸೇವಕರು:
ಇಲ್ಲಿಯವರೆಗೆ ‘ನನಗಲ್ಲ ನಿನಗೆ’ ಎಂಬ ಧೈಯ ವಾಕ್ಯದೊಂದಿಗೆ ಎನ್.ಎಸ್.ಎಸ್. ಘಟಕದಡಿ 10 ಸಾವಿರಕ್ಕೂ ಅಧಿಕ ಸ್ವಯಂಸೇವಕರು ಸೇವೆ ಮಾಡುವ ಅವಕಾಶ ಪಡೆದಿದ್ದಾರೆ. ಎನ್.ಎಸ್.ಎಸ್. ಘಟಕದ ಶಿಸ್ತು ಮತ್ತು ಪಾಲ್ಗೊಳ್ಳುವಿಕೆಯ ಪರಿಣಾಮವಾಗಿ ಇಂದು ಅನೇಕ ಸ್ವಯಂಸೇವಕರು ದೇಶವಿದೇಶದಲ್ಲಿ ಅತ್ಯುತ್ತಮ ಹುದ್ದೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು, ಅವರಿಂದ ಇಂದಿನ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರವನ್ನು ನೀಡಿ ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ದಾರಿದೀಪವಾಗಿರುವುದು ಉಲ್ಲೇಖನೀಯ ಮತ್ತು ಶ್ಲಾಘನಾರ್ಹ ಎಂದರು.
ರಾಜ್ಯ, ರಾಷ್ಟ್ರ ಮಟ್ಟದ 35 ಪ್ರಶಸ್ತಿ:
ಈವರಗೆ ಕಾಲೇಜಿನ ಎನ್.ಎಸ್.ಎಸ್. ಘಟಕಕ್ಕೆ ಹದಿನಾಲ್ಕು ಬಾರಿ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಪ್ರಶಸ್ತಿ, ಹತ್ತು ಬಾರಿ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ, ಹತ್ತು ಬಾರಿ ರಾಜ್ಯ ಶ್ರೇಷ್ಠ ಯೋಜನಾಧಿಕಾರಿ ಪ್ರಶಸ್ತಿ ಮತ್ತು ಒಂದು ರಾಷ್ಟ್ರ ಮಟ್ಟದ ಪ್ರಶಸ್ತಿ ಒಟ್ಟಿಗೆ 35 ಪ್ರಶಸ್ತಿ ಲಭಿಸಿರುವುದು ಎನ್.ಎಸ್.ಎಸ್. ಘಟಕದ ಹಿರಿಮೆಯನ್ನು, ಗರಿಮೆಯನ್ನು ಹೆಚ್ಚಿಸಿದೆ. ಇಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡ ರಾಜ್ಯ ಮತ್ತು ರಾಷ್ಟ್ರದ ಪ್ರಥಮ ಕಾಲೇಜು ಎಂಬ ಹೆಗ್ಗಳಿಕೆ ನಮ್ಮದಾಗಿದೆ.
ಇಲ್ಲಿಯವರೆಗೂ ಪ್ರತೀ ವರ್ಷವೂ ವಾರ್ಷಿಕ ಶಿಬಿರದ ಮೂಲಕ ಸುಮಾರು 40 ಶಾಲೆಗಳಲ್ಲಿ ಕೈತೋಟ ನಿರ್ಮಾಣ, ಸ್ವಚ್ಛತಾ ಅಭಿಯಾನ, ಹಾಗೂ ಘಟಕದ ನಿರಂತರ ಚಟುವಟಿಕೆಯ ಭಾಗವಾಗಿ ಬೀದಿನಾಟಕ, ಆರೋಗ್ಯ ಶಿಬಿರ, ಜಾಗೃತಿ ಜಾಥಾಗಳನ್ನು ಒಳಗೊಂಡಂತಹ ಸಮಾಜಮುಖಿ ಕಾರ್ಯಗಳು, ರಕ್ತದಾನ ಶಿಬಿರ, ಏಕದಿನ ಶಿಬಿರದ ಮೂಲಕವೂ ಗಮನಸೆಳೆದಿದೆ. ಕೊರೋನಾ ಅವಧಿಯಲ್ಲಿ ಹಾಗೂ ನೆರೆಪೀಡಿತ ಸಂದರ್ಭದಲ್ಲಿ ಸ್ವಯಂ ಸೇವಕರು ವಿಶೇಷವಾಗಿ ಸೇವೆಸಲ್ಲಿಸುವ ಮೂಲಕ ಜನಮನ್ನಣೆಗೆ ಪಾತ್ರವಾಗಿದೆ. ಪರಿಸರ ಸಂರಕ್ಷಣೆಗೂ ಆದ್ಯತೆ ನೀಡುತ್ತಿರುವ ಎನ್.ಎಸ್.ಎಸ್. ಘಟಕ ಗದ್ದೆ ನಾಟಿ, ಭತ್ತ ಕಟಾವಿನಲ್ಲಿಯೂ ತನ್ನ ಚಟುವಟಿಕಾ ಕ್ಷೇತ್ರವನ್ನು ವಿಸ್ತರಿಸಿಕೊಂಡಿದೆ. ದತ್ತು ಶಾಲೆ ಕೂಡ ಎನ್.ಎಸ್.ಎಸ್.ನ ವಿಶೇಷ ಯೋಜನೆಯಾಗಿದ್ದು ಇದರಡಿ ತಾಲೂಕಿನ ಹಲವು ಗ್ರಾಮಗಳ ಶಾಲೆಗಳಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು.
ರಾಷ್ಟ್ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾಗಿ:
ಈವರೆಗೆ ಎನ್.ಎಸ್.ಎಸ್. ಘಟಕವು ತಾಲೂಕಿನ ೪೦ಕ್ಕೂ ಅಧಿಕ ಗ್ರಾಮಗಳಲ್ಲಿ ವಾರ್ಷಿಕ ಶಿಬಿರಗಳನ್ನು ಪೂರೈಸಿದ ಹೆಗ್ಗಳಿಕೆಯಿದ್ದು ೨ ಬಾರಿ ಕಾಲೇಜಿನಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಯೋಜನೋತ್ಸವವನ್ನು ಕೂಡಾ ಯಶಸ್ವಿಯಾಗಿ ಪೂರೈಸಿದೆ. ದೇಶಾದ್ಯಂತ ಪ್ರತೀವರ್ಷ ನಡೆಯುವ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ಅನೇಕರು ಪಾಲ್ಗೊಂಡಿದ್ದು ದೆಹಲಿಯಲ್ಲಿ ನಡೆದ ರಾಷ್ಟ್ರಗಣರಾಜ್ಯೋತ್ಸವ ಪಥ ಸಂಚಲನ ಮತ್ತು ಕರ್ನಾಟಕದಲ್ಲಿನ ರಾಜ್ಯ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ನಮ್ಮ ಸ್ವಯಂ ಸೇವಕರು ಭಾಗವಹಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಕಾಲೇಜಿನ ಬಹುತೇಕ ಸಮಾವೇಶ ಹಾಗೂ ಬೆಳ್ತಂಗಡಿ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಸೇರಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಿದ ವಿಶೇಷತೆಯನ್ನು ಹೊಂದಿದೆ ಎಂದು ತಿಳಿಸಿದರು.
ಮುಗುಳಿ ಹಿ . ಪ್ರಾ. ಶಾಲೆ, ದತ್ತು :
ಸುವರ್ಣ ಸಮ್ಮಿಲನ ಕಾರ್ಯಕ್ರಮದ ಅಂಗವಾಗಿ ಬೆಳ್ತಂಗಡಿ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಮುಗುಳಿ ಇದನ್ನು ದತ್ತು ಶಾಲೆಯಾಗಿ ತೆಗೆದುಕೊಳ್ಳುವುದರ ಮೂಲಕ ಶಾಲಾ ಪರಿಸರವನ್ನು ಮತ್ತು ಕಾಲಾ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಎನ್.ಎಸ್.ಎಸ್ ಘಟಕವು ಸಹಕಾರಿಯಾಗಲಿದೆ.
ವ್ಯಕ್ತಿತ್ವ ವಿಕಸನಕ್ಕೆ ಮಹತ್ವವನ್ನು ನೀಡುವ ಎನ್.ಎಸ್.ಎಸ್. ಘಟಕವು ಹಲವು ಸಮಾಜಮುಖಿ ಮತ್ತು ಜೀವನ ಶಿಕ್ಷಣದ ಕಲಿಕೆಗಳ ಮೂಲಕ ವಿದ್ಯಾರ್ಥಿಯ ಸರ್ವತೋಮುಖ ವಿಕಸನಕ್ಕೆ ಭದ್ರ ಬುನಾದಿಯಾಗಿದೆ. ಮುಂದೆಯೂ ಎನ್.ಎಸ್.ಎಸ್. ಘಟಕವು ಇದೇ ಹಾದಿಯಲ್ಲಿ ಜವಾಬ್ದಾರಿತ್ರವಾಗಿ ಸಮಾಜ ಕಟ್ಟುವ ಕಾಯಕದಲ್ಲಿ ತೊಡಗಲಿದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಯೋಜನಾಧಿಕಾರಿ ಡಾ.ಮಹೇಶ್ ಕುಮಾರ್ ಶೆಟ್ಟಿ ಹೆಚ್. ಮತ್ತು ಪ್ರೊ.ದೀಪಾ ಆರ್.ಪಿ. , ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಪ್ರೊ. ಭಾಸ್ಕರ ಹೆಗ್ಡೆ, ವಿದ್ಯಾರ್ಥಿ ನಾಯಕರುಗಳಾದ ರಾಮಕೃಷ್ಣ ಶರ್ಮ ಎನ್, ದೀಪಾ, ನಿಕ್ಷೇಪ್ ಎನ್., ಸಿಂಚನ ಕಲ್ಲೂರಾಯ, ತ್ರಿಶೂಲ್ ಉಪಸ್ಥಿತರಿದ್ದರು.