ಉಜಿರೆ: ಶ್ರೀ ಧ. ಮಂ. ಶಿಕ್ಷಣ ಮಹಾವಿದ್ಯಾಲಯ ಉಜಿರೆ ಇಲ್ಲಿ ಸಂಗೀತ-ವೃತ್ತಿ- ವ್ಯಕ್ತಿತ್ವ ಎಂಬ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಲಾ ಸೌರಭ ಅಕಾಡೆಮಿ ಬೆಂಗಳೂರು ಇದರ ಅಧ್ಯಕ್ಷರಾದ ವಿದ್ವಾನ್ ದತ್ತಾತ್ರಿ ಇವರು ಮಾತನಾಡಿ ಸಂಗೀತ ಎಂಬುದು ಕಬ್ಬಿಣದ ಕಡಲೆಯಲ್ಲ ಮನಸ್ಸಿಗೆ ಸಂತೋಷ ಹಾಗೂ ಆತ್ಮಕ್ಕೆ ಸಮಾಧಾನ ನೀಡುವ ಸಾಧನ. ಸಂಗೀತ ಕಲಿತರೆ ಸಾಕು ನಾವು ದೇವರಿಗೆ ಸಮೀಪಿಸುತ್ತೇವೆ, ಸಂಗೀತ ಎನ್ನುವುದು ಜೀವನವನ್ನು ಕೊಡುತ್ತದೆ, ಮನುಷ್ಯನ ನೋವು ನಲಿವಿನಲ್ಲಿ ಜೊತೆಯಾಗಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಡಾ. ರಾಜೇಶ್ ನಾಯಕ್, ಅಧ್ಯಕ್ಷರು, ರಾಜಶ್ರೀ ಜೀವನ ಕೌಶಲ ತರಬೇತಿ ಕೇಂದ್ರ, ಬೆಂಗಳೂರು ಇವರು ಮಾತನಾಡಿ ನಮ್ಮ ಜ್ಞಾನ ನಾವೆಷ್ಟು ಕಲಿಸುತ್ತೇವೆ ಅದರ ಮೇಲೆ ಅವಲಂಬಿತವಾಗಿದೆ. ಸಂಗೀತವು ಒತ್ತಡ ನಿವಾರಣೆಯಲ್ಲಿ ಸಹಕರಿಸುತ್ತದೆ. ಜೀವನದ ದಾರಿಯನ್ನು ಸುಗಮಗೊಳಿಸುತ್ತದೆ. ನಾವು ಕಲಿಸಲು ಆರಂಭಿಸಿದ ಮೇಲೆ ನಾವು ಕಲಿಯುತ್ತೇವೆ ಎಂದರು.
ನಮ್ಮದು ಗುರುಪರಂಪರೆ ಹೊಂದಿರುವ ರಾಷ್ಟ್ರ. ಸಂಗೀತವು ಜೀವನದಲ್ಲಿ ಅತ್ಯಂತ ಮುಖ್ಯ ಪಾತ್ರ ವಹಿಸುತ್ತದೆ. ನೂರು ಮಂತ್ರ ಪಠಿಸುವ ಬದಲು ಒಮ್ಮೆ ಹಾಡಿ ಎಂಬ ಮಾತು ನಿಜವಾಗಿದೆ. ಸಂಗೀತವನ್ನು ವೃತ್ತಿಯಲ್ಲಿ ಅಳವಡಿಸಿದಾಗ ವ್ಯಕ್ತಿತ್ವ ಮತ್ತು ಬೋಧನೆಯು ಸಮತೋಲನಗೊಳ್ಳುತ್ತದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್ ಸಲ್ಡಾನ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರುಣ್ ರಾವ್ ನಂದಾವರ ಕೌಳಿಗೆ, ಮಾಲಿಕರು, ಸಿರಿಧಾನ್ಯ ಮಳಿಗೆ, ಬೆಂಗಳೂರು, ಉಪನ್ಯಾಸಕರಾದ ವಿದ್ಯಾಶ್ರೀ ಪಿ, ತಿರುಮಲೇಶ್ ರಾವ್ ಎನ್ ಕೆ, ಹರೀಶ್ ಕುಮಾರ್, ಅನುಷಾ ಡಿ ಜೆ, ಚೈತ್ರ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.
ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್ ಕೆ ಅತಿಥಿ ಪರಿಚಯಿಸಿ, ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.