ಬೆಳ್ತಂಗಡಿ: ಗಾಂಧೀಜಿ ಭಾರತಕ್ಕೆ ಮಾತ್ರವಲ್ಲ ಇಡೀ ವಿಶ್ವಕ್ಕೆ ನಾಯಕರು ಗಾಂಧೀಜಿಯವರ ಸಮಯಪ್ರಜ್ಞೆ ಸರಳ ಜೀವನ ಸೇವಾ ಮನೋಭಾವ ಸ್ವಚ್ಛತೆ ನುಡಿದಂತೆ ನಡೆದ ಅವರ ಬದುಕು ನಮಗೆಲ್ಲಾ ಪ್ರಯಾಣ ಈಗ ಪ್ರೇರಣೆಯಾಗಬೇಕು ಎಂದು ನಿವೃತ್ತ ಉಪನ್ಯಾಸಕರು ದ.ಕ ಗಮಕ ಕಲಾ ಪರಿಷತ್ತು ಅಧ್ಯಕ್ಷ ಮಧೂರು ಮೋಹನ ಕಲ್ಲೂರಾಯ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಯಾಗಿ ಭಾಗವಹಿಸಿ ಮಾತನಾಡಿದರು.
ಮಹಾತ್ಮ ಗಾಂಧೀಜಿಯವರು ನಮ್ಮನ್ನು ಅಗಲಿ ಎಷ್ಟೋ ವರ್ಷಗಳಾದರೂ, ಅವರು ಬಿಟ್ಟುಹೋದ ಆದರ್ಶಗಳು ಇಂದಿಗೂ, ಎಂದೆಂದಿಗೂ ಪ್ರಸ್ತುತ. ನಮ್ಮ ಮೇಲೆ ಗಾಢವಾಗಿ ಪರಿಣಾಮ ಬೀರಿದ ಗಾಂಧಿಜೀಯವರ ಸತ್ಯ, ಅಹಿಂಸೆ, ಶಾಂತಿ ಹಾಗೂ ಸರಳ ಜೀವನ. ಈ ಸಂದೇಶಗಳನ್ನು ಎಲ್ಲರೂ ಪಾಲಿಸಿಬಿಟ್ಟರೆ ಜಗತ್ತಿನ ಎಷ್ಟೋ ಸಮಸ್ಯೆಗಳು ಪರಿಹಾರವಾಗುತ್ತವೆ.
ಇಂದು ನಮಗೆ ಜಗತ್ತಿನಲ್ಲಿ ಶಾಂತಿ ಬೇಕಾಗಿದೆ. ಹಿಂಸೆಯಿಂದ ಸಾಧಿಸುವಂಥದ್ದು ಏನೂ ಇಲ್ಲ. ಶಾಂತಿಯಿಂದಲೇ ಬಗೆಹರಿಸಿಕೊಳ್ಳಬೇಕು. ನಮ್ಮ ಹೋರಾಟ, ಚಳವಳಿಗಳೂ ಅಹಿಂಸಾಮಾರ್ಗದಲ್ಲಿಯೇ ಸಾಗಲಿ ಎಂಬ ಮೇಲ್ಪಂಕ್ತಿ ಹಾಕಿದವರು ಬಾಪೂಜಿ ಎಂದರು.
ಈ ಸಂದರ್ಭದಲ್ಲಿ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕೆ ಕಾಶಿಪಟ್ಣ, ಕೆ.ಎಮ್ ನಾಗೇಶ್ ಕುಮಾರ್ ಗೌಡ ,ಜಿಲ್ಲಾ ಕೆಡಿಪಿ ಸದಸ್ಯರಾದ ಸಂತೋಷ್ ಕುಮಾರ್ ,ಜಿಲ್ಲಾ ಗ್ಯಾರಂಟಿ ಸಮಿತಿಯ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ಸೇವಾದಳದ ಅಧ್ಯಕ್ಷ ಪ್ರದೀಪ್ ಕೆ ಸಿ ಗ್ರಾಮೀಣ ಎಸ್ ಸಿ ಘಟಕದ ಅಧ್ಯಕ್ಷ ನೇಮಿರಾಜ್ ಕಿಲ್ಲೂರು, ಜಿಲ್ಲಾ ಅರೋಗ್ಯ್ರ ರಕ್ಷಾ ಸಮಿತಿಯ ಸದಸ್ಯರಾದ ಅಬ್ದುಲ್ ಕರೀಮ್ ಗೇರುಕಟ್ಟೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ವಂದಾನ ಭಂಡಾರಿ ಹಾಗೂ ಸರ್ಕಾರದ ನಾಮನಿರ್ದೇಶಿತ ಸದಸ್ಯರು ,ಪಕ್ಷದ ವಿವಿಧ ಸಮಿತಿಯ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.