ಮುಂಡಾಜೆ: ಭೀಕರ ಮಳೆಯಿಂದಾಗಿ ಮುಂಡಾಜೆ ಗ್ರಾಮದ ಮುಂಡ್ರುಪ್ಪಾಡಿಯಲ್ಲಿ ಕಿಂಡಿ ಅಣೆಕಟ್ಟುವಿನಲ್ಲಿ ಮರದ ದಿಮ್ಮಿಗಳು ಶೇಖರಣೆಗೊಂಡ ಪರಿಣಾಮ ಸ್ಥಳೀಯ ತೋಟಗಳಿಗೆ ನೀರು ನುಗ್ಗಿ ಅಪಾರ ಹಾನಿಯಾದ ಘಟನೆ ಅ.6ರಂದು ನಡೆದಿದೆ.
ಸ್ಥಳೀಯರಾದ ಅವಿನಾಶ್ ಗೋಖಲೆ, ಶ್ರೀನಿವಾಸ್ ಗೋಖಲೆ, ಸಂಜೀವ್ ಶೆಟ್ಟಿ, ದಯಾನಂದ ಶೆಟ್ಟಿ ಮುಂತಾದವರ ತೋಟಕ್ಕೆ ನೀರು ನುಗ್ಗಿ ಹಾನಿಯಾಗಿದೆ.
2019ರಲ್ಲಿ ಪ್ರವಾಹ ಬಂದ ನಂತರ, ಅಂತರ್ಜಲ ಅಭಿವೃದ್ದಿ ಮತ್ತು ಸಣ್ಣ ನೀರಾವರಿ ಯೋಜನೆಯಡಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದ್ದು, ಕಿಂಡಿ ಅಣೆಕಟ್ಟು ಸ್ಥಳೀಯ ತೋಟದ ಮಟ್ಟಕ್ಕೆ ಸಮವಾಗಿರುವ ಕಾರಣ ಪ್ರವಾಹದಲ್ಲಿ ಕೊಚ್ಚಿ ಬಂದ ಮರದ ದಿಮ್ಮಿಗಳು ಕಿಂಡಿ ಅಣೆಕಟ್ಟಿನಲ್ಲಿ ನಿಂತು ನೀರು ತೋಟಗಳಿಗೆ ನುಗ್ಗುತ್ತಿದೆ.
ಅಸಮರ್ಪಕವಾದ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಸ್ಥಳೀಯ ನಾಯಕರುಗಳು ತಡೆಗೋಡೆ ಕಟ್ಟಿಸಿ ಕೊಡುತ್ತೇವೆ ಎಂಬ ಭರವಸೆಯನ್ನು ನೀಡಿದ್ದು ಇದುವರೆಗೂ ಆ ಕೆಲಸವಾಗಿಲ್ಲ. ಪಂಚಾಯತ್‌ನವರಿಗೆ ಕರೆ ಮಾಡಿ ತಿಳಿಸಿದರೂ ಸರಿಯಾದ ಸ್ಪಂದನೆ ನೀಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.