ಬೆಳ್ತಂಗಡಿ: ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ವತಿಯಿಂದ ಬೆಳ್ತಂಗಡಿ ತಾಲೂಕಿನ ವಿವಿಧ ಕಡೆಗಳಲ್ಲಿ ನಡೆದ ಕಾಮಗಾರಿಗಳ ಬಿಲ್ಲನ್ನು ಪಾವತಿಸುವಂತೆ ಒತ್ತಾಯಿಸಿ, ಬೆಳ್ತಂಗಡಿ ಲೋಕೋಪಯೋಗಿ ಇಲಾಖೆಯ ಕೆಲ ಗುತ್ತಿಗೆದಾರರು ಅ.29ರಂದು ಮಂಗಳೂರು ಲೋಕೋಪಯೋಗಿ ಕಚೇರಿಯಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಬೆಳ್ತಂಗಡಿ ತಾಲೂಕು ಲೋಕೋಪಯೋಗಿ ಇಲಾಖೆ ವತಿಯಿಂದ ತಾಲೂಕಿನಾದ್ಯಂತ ಇಲಾಖೆಗೆ ಸೇರಿದ ರಸ್ತೆಗಳ ನಿರ್ವಹಣೆ, ಸೇತುವೆಗಳ ರಚನೆ, ರಸ್ತೆ ಡಾಮರೀಕರಣ, ರಸ್ತೆ ದುರಸ್ತಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರು ನಿರ್ವಹಿಸುತ್ತಾರೆ. ಆದರೆ ಇವರಿಗೆ ಕಾಮಗಾರಿ ನಿರ್ವಹಿಸಿದ ಹಣ ಸರಕಾರದಿಂದ ಸರಿಯಾದ ಸಮಯಕ್ಕೆ ಬಿಡುಗಡೆಯಾಗುತ್ತಿಲ್ಲ. ಹಣಕ್ಕಾಗಿ ಅಲೆದಾಟ, ವರ್ಷಗಟ್ಟೆಲೆ ಕಾಯಬೇಕಾಗುತ್ತದೆ. ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಈಗಾಗಲೇ ಮಾಡಿರುವ ಕಾಮಗಾರಿಯಲ್ಲಿ ಗುತ್ತಿಗೆದಾರರಿಗೆ ಸುಮಾರು ೫೦ ಕೋಟಿಯಷ್ಟು ಅನುದಾನ ಬಿಡುಗಡೆಗೆ ಬಾಕಿಯಾಗಿದೆ.
ಗುತ್ತಿಗೆದಾರರು ಕೆಲಸ ನಿರ್ವಹಿಸಿದರೂ ಸರಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ ಗುತ್ತಿಗೆದಾರರು ಬಹಳಷ್ಟು ಸಂಕಷ್ಟವನ್ನು ಅನುಭವಿಸಬೇಕಾಗಿದೆ. ಕೆಲಸವೂ ಇಲ್ಲದೆ, ಹಣವೂ ಬಿಡುಗಡೆಯಾಗದೆ ಜೀವನ ನಿರ್ವಹಣೆಗೆ ಬವಣೆ ಪಡುವ ಸ್ಥಿತಿಯಾಗಿದೆ. ಹಣ ಬಿಡುಗಡೆ ಮಾಡುವಂತೆ ಸರಕಾರಕ್ಕೆ ಮನವಿ ಸಲ್ಲಿಸಿದರೂ, ಇಂದು, ನಾಳೆ ಎಂಬ ಕುಂಟು ನೆಪವನ್ನು ಒಡ್ಡಿ ಗುತ್ತಿಗೆದಾರರನ್ನು ಸಮಾಧಾನ ಪಡಿಸುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆಯೇ ಹೊರತು ಯಾವುದೇ ಫಲ ನೀಡಿಲ್ಲ.
ಈ ಹಿನ್ನಲೆಯಲ್ಲಿ ಬೆಳ್ತಂಗಡಿ ತಾಲೂಕಿನ ಲೋಕೋಪಯೋಗಿ ಇಲಾಖೆಯ ಕೆಲ ಗುತ್ತಿಗೆದಾರರು ಅ.29ರಂದು ಮಂಗಳೂರು ಲೋಕೋಪಯೋಗಿ ಇಲಾಖೆಯ ಕಚೇರಿಯಲ್ಲಿ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ, ಧರಣಿ ಸತ್ಯಾಗ್ರಹ ನಡೆಸಿದರು. ಗುತ್ತಿಗೆದಾರರಾದ ರಾಜಶೇಖರ್ ಅಂಡಿಂಜೆ, ಅನಿಲ್ ಬೆಳ್ತಂಗಡಿ, ದಿಶಾಂತ್ ಬೆಳ್ತಂಗಡಿ, ದಯಾನಂದ ಬೆಳ್ತಂಗಡಿ, ಸಹದೇವ್, ಬದ್ರುದ್ದೀನ್, ಸಂಯುಕ್ತ್ ಕಡ್ತಿಲ ಮೊದಲಾದವರು ಕಚೇರಿಯ ಎದುರು ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ವಿಭಾಗೀಯ ಇಂಜಿನಿಯರ್ ಅಮರನಾಥ್ ಜೈನ್ ಅವರು ಪ್ರತಿಭಟನಾ ನಿರತರೊಡನೆ ಮಾತುಕತೆ ನಡೆಸಿ, ತಾನು ಬೆಳ್ತಂಗಡಿ ಉಪ ವಿಭಾಗಕ್ಕೆ ಭೇಟಿ ನೀಡಿ ಎಲ್ಲಾ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸುತ್ತೇನೆ. ಈಗಾಗಲೇ ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ. ಒಂದು ತಿಂಗಳ ಒಳಗೆ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ನಂತರ ಧರಣಿಯನ್ನು ಹಿಂತೆಗೆದುಕೊಳ್ಳಲಾಯಿತು.