23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಕಾರ್‍ಯದರ್ಶಿ ಶ್ರೀಮತಿ ರಶ್ಮಿತಾ ಜೈನ್ ಅವರಿಗೆ 2024 ನೆಯ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಾಪ್ತವಾಗಿದೆ.

ಸಾಮಾಜಿಕ, ಸಾಂಸ್ಕೃತಿಕ, ಪರಿಸರ ಹಾಗೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರಕ್ಕೆ ಅವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಿ ಗೌರವಿಸಿಲಾಗಿದೆ. ನ.1 ರಂದು ಕರ್ನಾಟಕ ರಾಜ್ಯೋತ್ಸವದ ಶುಭಾವಸರದಲ್ಲಿ ಮಂಗಳೂರಿನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಈ ಪುರಸ್ಕಾರವನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಸಂಸದರಾದ ಬ್ರಿಜೇಶ್ ಚೌಟ ಹಾಗೂ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಡಾ.ಭರತ್ ಶೆಟ್ಟಿ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಶ್ರೀಮತಿ ರಶ್ಮಿತಾ ಜೈನ್ ಅವರು ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿ ತಮ್ಮ ಪತಿ ಯುವರಾಜ್ ಜೈನ್ ಅವರ ಜೊತೆಗೂಡಿ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸಿಕೊಂಡು ಬಂದಿದ್ದಾರೆ. ಈ ಸಂಸ್ಥೆಯಲ್ಲಿ ಇಂದು ಎಲ್.ಕೆ.ಜಿ.ಯಿಂದ ಪಿ.ಯು.ಸಿ.ವರೆಗೆ ಒಟ್ಟು 3೦೦೦ ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಸಂಸ್ಥೆಯ ಮೂಲಕ ಈವರೆಗೆ ಹೊರಹೋದ ಸಾವಿರಾರು ವಿದ್ಯಾರ್ಥಿಗಳು ವೈದ್ಯರಾಗಿ, ಇಂಜಿನಿಯರ್‌ಗಳಾಗಿ ವಿಜ್ಞಾನಿಗಳಾಗಿ, ಅಧ್ಯಾಪಕರಾಗಿ, ಆರ್ಥಿಕ ವಲಯದ ಅನೇಕ ಸಂಸ್ಥೆಗಳಲ್ಲಿ ಉದ್ಯೋಗಸ್ಥರಾಗಿ ಯೋಗ್ಯ ಪ್ರಜೆಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಮತಿ ರಶ್ಮಿತಾ ಅವರು ತಮ್ಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣದೊಂದಿಗೆ ಗುರುಕುಲ ಮಾದರಿಯ ಜೀವನಶಿಕ್ಷಣಕ್ಕೆ ಒತ್ತು ನೀಡಿದ್ದಾರೆ. ಯೋಗ, ಧ್ಯಾನ, ಭಜನೆ ಮೊದಲಾದುವುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಿದ್ದಾರೆ. ಗುರುಹಿರಿಯರು, ತಂದೆ-ತಾಯಿಗಳ ಬಗೆಗೆ ಗೌರವ, ರಾಷ್ಟ್ರೀಯತೆ, ಸಾಮಾಜಿಕ ಸನ್ನಡತೆ, ಭಾರತೀಯ ಸನಾತನ ಸಂಸ್ಕೃತಿಯ ಬಗೆಗೆ ಆದರಭಾವವನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಯೋಗ್ಯ ತರಬೇತಿಯನ್ನು ನಿರಂತರವಾಗಿ ನೀಡುತ್ತ ಬಂದಿದ್ದಾರೆ. ಸಂಸ್ಥೆಯ ಮೂಲಕ ಮೂಡುಬಿದಿರೆ ಪರಿಸರದ ಜೇಸಿ, ರೋಟರಿ, ಜೈನ್ ಮಿಲನ್ ಮೊದಲಾದ ಸಂಘಟನೆಗಳ ಸಹಯೋಗದಲ್ಲಿ ಅನೇಕ ಪರಿಸರ ಸಂಬಂಧಿ ಹಾಗೂ ಸಾಮಾಜಿಕ ಸೇವಾ ಕಾರ್‍ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅವರಿಗೆ ಅತ್ಯಂತ ಪ್ರಿಯವಾದ ಸಸ್ಯಶ್ಯಾಮಲ ಕಾರ್‍ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮೂಲಕ ಒಂದು ಸಾವಿರ ಗಿಡಗಳನ್ನು ನೆಟ್ಟು ಪೋಷಿಸಲಾಗಿದೆ.

ಸಂಸ್ಥೆಯ ಆವರಣದಲ್ಲಿ ಹಸಿರು ಉಸಿರಾಡುವಂತೆ ಮಾಡಿ ಮಕ್ಕಳಿಗೆ ಪರಿಸರ ಪ್ರೀತಿಯನ್ನುಂಟುಮಾಡಿದ್ದಾರೆ. ಮೂಡುಬಿದಿರೆ ಪರಿಸರದಲ್ಲಿ ನಡೆಸಲಾದ ಬೃಹತ್ ಸ್ವಚ್ಛತಾ ಆಂದೋಲನ, ಕೊರೋನಾ ಸಂದರ್ಭದ ಅಶಕ್ತರಿಗೆ ದವಸಧಾನ್ಯಗಳ ಕಿಟ್ ವಿತರಣೆ ಹಾಗೂ ಉಚಿತ ಲಸಿಕೆ ಕಾರ್‍ಯಕ್ರಮಗಳು ಜನಮನ ತಲುಪಿವೆ. ಮನೆಯಿಲ್ಲದವರಿಗೆ ಮನೆಕಟ್ಟಿಕೊಟ್ಟಿದ್ದಾರೆ. ಹಲವು ಸಂಘ-ಸಂಸ್ಥೆಗಳಿಗೆ, ಸರ್ಕಾರಿ ಶಾಲೆಗಳಿಗೆ, ಸರ್ಕಾರಿ ಕಚೇರಿಗಳಿಗೆ ಪೀಠೋಪಕರಣಗಳನ್ನು ಉಚಿತವಾಗಿ ಒದಗಿಸಿಕೊಟ್ಟಿದ್ದಾರೆ.


ಶ್ರೀಮತಿ ರಶ್ಮಿತಾ ಅವರು ಅತ್ಯುತ್ತಮ ತರಬೇತುದಾರರು ಕೂಡ. ನೂರಾರು ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ವ್ಯಕ್ತಿತ್ವ ವಿಕಸನ, ಪರೀಕ್ಷಾ ತಯಾರಿ ಮೊದಲಾದ ವಿಷಯಗಳ ಕುರಿತು 200 ಕ್ಕೂ ಹೆಚ್ಚಿನ ತರಬೇತಿಗಳನ್ನು ನೀಡಿದ್ದಾರೆ. ನೂರಾರು ಮಂದಿ ಸಾಧಕರನ್ನು, ನಿವೃತ್ತ ಶಿಕ್ಷಕರನ್ನು ಗುರುತಿಸಿ ಸಂಸ್ಥೆಗೆ ಆಹ್ವಾನಿಸಿ ಸನ್ಮಾನಿಸುವ ಸಹೃದಯತೆಯನ್ನು ಮೆರೆದಿದ್ದಾರೆ. ಇತಿಹಾಸ ಪ್ರಸಿದ್ಧ ತುಳುನಾಡಿನ ಹೆಮ್ಮೆಯ ರಾಣಿ ಅಬ್ಬಕ್ಕಳ ವಿಶೇಷ ಅಂಚೆ ಚೀಟಿಯನ್ನು ಭಾರತೀಯ ಅಂಚೆ ಇಲಾಖೆಯ ಮೂಲಕ ಮುದ್ರಿಸಿ ಲೋಕಾರ್ಪಣೆಗೊಳಿಸಿದ್ದಾರೆ. ರಾಜ್ಯಮಟ್ಟದ ಯುವಸಮ್ಮೇಳನಗಳನ್ನು ನಡೆಸಿ ಯುವಕರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತ ಬಂದಿದ್ದಾರೆ. ಹಲವು ಹತ್ತು ಸಾಹಿತ್ಯ, ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ಸಂಸ್ಥೆಯ ಮೂಲಕ ನಡೆಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Related posts

ರಸ್ತೆಯ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟ ಪಡಂಗಡಿ ಪಂಚಾಯತ್ ಸದಸ್ಯರು

Suddi Udaya

ಪಟ್ರಮೆಯಲ್ಲಿ ಗುಡ್ಡ ಕುಸಿತ : ಹಲವು ಮನೆಗಳಿಗೆ ಹಾನಿ

Suddi Udaya

ಗುರುವಾಯನಕೆರೆ: ಎಸ್.ಎಂ.ಎ ವತಿಯಿಂದ ನೂತನ ಮದರಸ ಕಟ್ಟಡ ಉದ್ಘಾಟನೆ

Suddi Udaya

ಅಳದಂಗಡಿ ಪಾಲಬೆ ಮನೆಯ ಭವ್ಯ ರಂಗಮಂಟಪದಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನ ಪ್ರದರ್ಶನ

Suddi Udaya

ಉಜಿರೆ ಅನುಗ್ರಹ ಶಾಲೆಯಲ್ಲಿ “ಸ್ವಭಾವವನ್ನು ಬೆಳೆಸಿ, ಭವಿಷ್ಯವನ್ನು ರೂಪಿಸೋಣ” ವಿಶೇಷ ಕಾರ್ಯಕ್ರಮ

Suddi Udaya

ಸ್ವಾತಿ ಸೂರಜ್ ನೆಲ್ಲಿತ್ತಾಯ ಶಿಶಿಲ ಇವರ ಚೊಚ್ಚಲ ಕವನ ಸಂಕಲನ “ಮಂಜರಿ” ಬಿಡುಗಡೆ

Suddi Udaya
error: Content is protected !!