ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಳ್ತಂಗಡಿ ತಾಲೂಕು ಶಾಖೆಯ 2024-29ನೇ ಅವಧಿಯ ಕಾರ್ಯಕಾರಿ ಸಮಿತಿ ಚುನಾವಣೆಯಲ್ಲಿ ಮತದಾರರ ಪಟ್ಟಿಯಲ್ಲಿ ವಿವಾದ ಉಂಟಾದಾಗಿ ಇಬ್ಬರು ಶಿಕ್ಷಕರು ಪೊಲೀಸ್ ಠಾಣೆಯ ಮೇಟ್ಟಿಲೇರಿದರೆ, ಇದೀಗ ಚುನಾವಣೆಯಲ್ಲಿ ನಿಯಮಗಳನ್ನು ಉಲ್ಲಂಘಿಸಿಲಾಗಿದ್ದು, ಇದರ ಬಗ್ಗೆ ಸೂಕ್ತ ವಿವರಣೆ ನೀಡುವಂತೆ ಸಂಘದ ಮೂರು ಮಂದಿ ನಿರ್ದೇಶಕರು ಚುನಾವಣಾಧಿಕಾರಿಗಳಿಗೆ ಮನವಿ ನೀಡಿದ್ದಾರೆ.
ನಿರ್ದೇಶಕರಾದ ಪ್ರಶಾಂತ್ ಡಿ.ಬಳೆಂಜ, ಪ್ರದೀಪ್ ಕುಮಾರ್, ಕೆ. ಸದಾಶಿವ ರಾವ್ ಈ ಮನವಿಯನ್ನು ನೀಡಿದ್ದಾರೆ.
ಮನವಿಯಲ್ಲಿ ಚುನಾವಣೆಗೆ ಸಂಬಂಧಿಸಿದ ಆದೇಶ, ನೋಟೀಸುಗಳನ್ನು ಸಂಘದ ಸದಸ್ಯರಿಗೆ ತಿಳಿಯಪಡಿಸಲು ಸೂಕ್ತ ನೋಟೀಸು ಬೋರ್ಡ್ ಇರುವುದಿಲ್ಲ. ಆದೇಶ, ನೋಟೀಸುಗಳನ್ನು ಸಂಘದ ಕಛೇರಿ ಕಟ್ಟಡದ ಗೋಡೆಗೆ ಅಂಟಿಸಿ ಪ್ರಚುರ ಪಡಿಸಲಾಗಿದೆ.
ನಾಮಪತ್ರ ತಿರಸ್ಕೃತಗೊಂಡ ಸದಸ್ಯರಿಗೆ ಯಾವ ಕಾರಣಕ್ಕಾಗಿ ನಾಮಪತ್ರ ತಿರಸ್ಕೃತಗೊಂಡಿದೆ
ಯೆಂದು ಲಿಖಿತವಾಗಿ ಈ ದಿನದವರೆಗೆ ತಿಳಿಸಿರುವುದಿಲ್ಲ ಮತ್ತು ತಿರಸ್ಕೃತಗೊಂಡವರ ಠೇವಣಿಯನ್ನು ಹಿಂತಿರುಗಿಸಿರುವುದಿಲ್ಲ.
ಈ ಸಂಘದ ಅಧ್ಯಕ್ಷ, ಕೋಶಾಧಿಕಾರಿ ಮತ್ತು ರಾಜ್ಯ ಪರಿಷತ್ ಹುದ್ದೆಗೆ ಸ್ಪರ್ಧಿಸುವವರಿಗೆ ಚಿಹ್ನೆಯನ್ನು ಆಯ್ಕೆ ಮಾಡಲು ಸೂಕ್ತ ವ್ಯವಸ್ಥೆಯನ್ನು ಮಾಡಿರುವುದಿಲ್ಲ. ಇದರಿಂದಾಗಿ ಮತ ಕೇಳಲು, ಪ್ರಚಾರ ಮಾಡಲು ತೊಂದರೆಯಾಗಿರುತ್ತದೆ.
ಈ ವರೆಗೆ ಚುನಾವಣಾ ಸಿಬ್ಬಂದಿಯನ್ನು ನೇಮಕ ಮಾಡಿರುವ ಬಗ್ಗೆ ಘೋಷಣೆ ಮಾಡಿರುವುದಿಲ್ಲ. ಚುನಾವಣಾ ಪ್ರಕ್ರಿಯೆಯ ವಿವರವನ್ನು ಆರಂಭದಿಂದ ಇಲ್ಲಿಯವರೆಗೆ ಇಲಾಖಾ ಮುಖ್ಯಸ್ಥರಿಗೆ, ದೃಶ್ಯ ಮತ್ತು ಮುದ್ರಣ ಮಾಧ್ಯಮದವರಿಗೆ ಲಿಖಿತವಾಗಿ ನೀಡಿರುವುದಿಲ್ಲ.
ನ. 16 ರಂದು ನಡೆಯುವ ಚುನಾವಣಾ ಪ್ರಕ್ರಿಯೆಯ ವಿವರವನ್ನು ಲಿಖಿತವಾಗಿ ಚುನಾಯಿತ ನಿರ್ದೇಶಕರಿಗೆ ನೀಡಿರುವುದಿಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ, ಇದರ ಬಗ್ಗೆ ಕೂಡಲೇ ನೀಡುವಂತೆ ವಿನಂತಿಸಿದ್ದಾರೆ. ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಇದುವರೆಗೆ ಅವಿರೋಧ ಆಯ್ಕೆಗಳೇ ನಡೆದಿದ್ದು, ಇತಿಹಾಸದಲ್ಲಿ
ಪೊಲೀಸ್ ಠಾಣೆಯ ಮೇಟ್ಟಿಲೇರಿದ ಪ್ರಕರಣ ನಡೆದಿರುವುದು ಇದು ಪ್ರಥಮವಾಗಿದೆ.