ಬೆಳ್ತಂಗಡಿ: ಸಾಮಾಜಿಕ ಸೇವಾ ಚಟುವಟಿಕೆಗಳನ್ನು ಯಾವುದೇ ಸದ್ದು-ಸುದ್ದಿಗಳಿಲ್ಲದೆ ಕಳೆದ ನಾಲ್ಕು ದಶಕಗಳಿಂದ ಮಾಡುತ್ತಾ ಬಂದಿರುವ ತಾಲೂಕಿನ ಉಜಿರೆ ಗ್ರಾಮದ ಅತ್ತಾಜೆ ಕೇಶವ ಭಟ್ ಮತ್ತು ಅವರ ಅವಿಭಕ್ತ ಕುಟುಂಬಕ್ಕೆ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಉಂಡೆಮನೆ ಶಂಭು ಭಟ್ಟರ ಸವಿನೆನಪಿನ ಶಿಕ್ಷಣ ಪ್ರೋತ್ಸಾಹ ಯೋಜನೆ’ಯ ಸಂಚಾಲಕ ಯು. ಎಸ್. ವಿಶ್ವೇಶ್ವರ ಭಟ್ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂದೆ ದಿ. ರಾಮಕೃಷ್ಣ ಭಟ್ ಮತ್ತು ತಾಯಿ ಪದ್ಮಾವತಿ ಅಮ್ಮನವರ ಮಾರ್ಗದರ್ಶನ, ಅವರಿಂದ ಪಡೆದ ಜೀವನದಲ್ಲಿ ಮುಕ್ತ ಆಯ್ಕೆಯ ಸ್ವಾತಂತ್ರ್ಯಗಳಿಂದ ಎಳವೆಯಿಂದಲೇ ಬೆಳ್ತಂಗಡಿ ತಾಲೂಕಿನ ಅದರಲ್ಲೂ ವಿಶೇಷವಾಗಿ ಉಜಿರೆಯ ಆಸುಪಾಸಿನ ಕ್ಷೇತ್ರಗಳಲ್ಲಿ ಜನಸಾಮಾನ್ಯರೊಂದಿಗೆ ಬೆರೆತು ಅವರ ಕಷ್ಟ- ನಷ್ಟಗಳಲ್ಲಿ ವಿಶೇಷವಾಗಿ ಜನರ ಸಾವು- ನೋವುಗಳಲ್ಲಿ ಭಾಗಿಯಾಗುತ್ತಾ ಜನಸೇವೆ ಗೈಯುತ್ತಾ ಬಂದಿರುವವರು ಅತ್ತಾಜೆಯ ಸೋದರರು. ಎಲೆಮರೆಯ ಹೂವಿನಂತೆ ಕಣ್ಣಿಗೆ ಕಾಣಿಸದಂತೆ, ಯಾವುದೇ ಸ್ಥಾನ- ಮಾನಗಳನ್ನು ಆಶಿಸದೆ ಕೆಲಸ- ಸಮಾಜಸೇವೆಗಳನ್ನು ತಳಮಟ್ಟದಿಂದಲೇ ತನು – ಮನ – ಧನಗಳ ಮೂಲಕ ಮಾಡುತ್ತಾ ಬಂದಿದ್ದಾರೆ. ಶ್ರೀರಾಮಚಂದ್ರಾಪುರ ಮಠದ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ, ರಾ.ಸ್ವ. ಸೇ. ಸಂಘದ ಸಂಘಟನಾ ಚಟುವಟಿಕೆಗಳು, ಸ್ಥಳೀಯ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಸಾಹಿತ್ಯಕ ಕಾರ್ಯಕ್ರಮಗಳಲ್ಲಿ ಕ್ರಿಯಾತ್ಮಕ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ತಾಯಿ ಪದ್ಮಾವತಿ ಅಮ್ಮ ಮತ್ತು ಸೋದರರಾದ ಅತ್ತಾಜೆ ಕೇಶವ ಭಟ್, ಶ್ಯಾಮ ಭಟ್, ಶಂಕರ ಭಟ್ ಮತ್ತು ಈಶ್ವರ ಭಟ್ ಮತ್ತು ಮನೆಮಂದಿಯ ಸರ್ವಸೇವೆಗಳನ್ನು ಗುರುತಿಸಿ ಈ ವರ್ಷದ ಉಂಡೆಮನೆ ಪ್ರಶಸ್ತಿಯನ್ನು ಪ್ರದಾನ ಮಾಡಿ ಗೌರವಿಸಲಾಗುವುದು. ‘
ಅತ್ತಾಜೆ ಕುಟುಂಬ ಸದಸ್ಯರು ಮಹಾರಕ್ತದಾನಿಗಳಾಗಿರುವುದು ಇವರ ನಿಸ್ವಾರ್ಥ ಸೇವೆಯ ದ್ಯೋತಕವಾಗಿದೆ. ಕೇಶವ ಭಟ್ ನೂರಕ್ಕೂ ಮಿಕ್ಕಿ, ಶ್ಯಾಮ ಭಟ್ -೪೫, ಶಂಕರ ಭಟ್ -೪೦ ಈಶ್ವರ ಭಟ್ -೫೧ ಬಾರಿ ರಕ್ತದಾನ ಮಾಡಿರುತ್ತಾರೆ. ಇವರ ಮಕ್ಕಳೂ ರಕ್ತದಾನಿಗಳಾಗಿರುವುದು ರಕ್ತದಾನಕುಟುಂಬವಾಗಿ ಇವರು ಸಮಾಜಕ್ಕೆ ಆದರ್ಶವಾಗಿದ್ದಾರೆ. ನ.30
ರಂದು ಗೋಕರ್ಣದ ಅಶೋಕೆಯಲ್ಲಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಮ್ ನಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.